ಮಹಿಳೆಯರ ಮಾಂಗಲ್ಯ ಸರ ಅಪಹರಿಸುತ್ತಿದ್ದ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಳ್ಳರಿಂದ 31.98 ಲಕ್ಷ ರೂ. ಮೌಲ್ಯದ ಚಿನ್ನಾ ಭರಣ ಮತ್ತು ಎರಡು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರು ಶಾಂತಿನಗರದ ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂ (32), ರಾಜೀವ್ ನಗರದ ಸೈಯ್ಯದ್ ಅಯೂಬ್ (32) ಬಂಧಿತರು. 253 ಗ್ರಾಂ ಚಿನ್ನ, 178 ಗ್ರಾಂ ಬೆಳ್ಳಿ, ಬಳಸುತ್ತಿದ್ದ ಎರಡು ಬೈಕ ವಶಕ್ಕೆ ಪಡೆಯಲಾಗಿದೆ, ಇವುಗಳ ಒಟ್ಟು ಮೌಲ್ಯ 31,98,100 ರೂ. ಎನ್ನಲಾಗಿದೆ.
ಮಳವಳ್ಳಿ ತಾಲೂಕು ಚಿಕ್ಕೇಗೌಡನದೊಡ್ಡಿ ಗ್ರಾಮದ ಎಸ್.ಸರಿತಾ ನಡೆದುಕೊಂಡು ಹೋಗುತ್ತಿದ್ದಾಗ ಕಿರುಗಾವಲು ಸಂತೆಮಾಳದ ಕಡೆಯಿಂದ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು 35 ಗ್ರಾಂ ತೂಕದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆಂದು ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೆಚ್ಚುವರಿ ಎಸ್ಪಿ ಸಿ.ಈ ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಯಶವಂತ್ ಕುಮಾರ್ ಮಾರ್ಗದರ್ಶನದಲ್ಲಿ ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕಿರುಗಾವಲು ಠಾಣೆಯ ಪಿಎಸ್ಐ ಡಿ.ರವಿಕುಮಾರ್ ಮತ್ತು ತಂಡ ಕಾರ್ಯಾ ಚರಣೆ ನಡೆಸಿ ಕಳ್ಳತನ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಸದ್ದಾಂ ಹಾಗೂ ಸೈಯ್ಯದ್ ಅಯೂಬ್ನನ್ನು ಮೈಸೂರಿನ ರಾಜೀವ್ ನಗರದಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದಿದೆ.
ಆರೋಪಿಗಳ ವಿಚಾರಣೆ ನಡೆಸಿದಾಗ ಸದ್ದಾಂ ಹುಸೇನ್ ವಿರುದ್ಧ ಮೈಸೂರಿನಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುವ ಮತ್ತು ಸೈಯ್ಯದ್ ಅಯೂಬ್ ವಿರುದ್ಧ ಶಿವಮೊಗ್ಗ, ಮೈಸೂರು, ಮಂಡ್ಯ, ಚಾಮರಾಜನಗರ, ದಾವಣಗೆರೆ ಜಿಲ್ಲೆಗಳಲ್ಲಿ 38 ಕಳ್ಳತನ ಪ್ರಕರಣಗಳು ದಾಖಲಾಗಿರುವ ವಿಚಾರ ಪತ್ತೆಯಾಗಿದೆ.
ಆರೋಪಿಗಳ ವಿರುದ್ಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ 3, ನಾಗಮಂಗಲ ಪೊಲೀಸ್ ಠಾಣೆಯಲ್ಲಿ 1, ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ 2, ಮೈಸೂರು ಹಾಗೂ ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿವೆ.


