ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ರಾಯಚೂರಿನ ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಎಲೆಬಿಚ್ಚಾಲಿ ಗ್ರಾಮದ ಬಳಿ ನಡೆದಿದೆ.
ಮಂತ್ರಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದ ದೇವನಹಳ್ಳಿ ತಾಲೂಕಿನ ಚಿನವಂಡನಹಳ್ಳಿಯ ಮುತ್ತುರಾಜು(23) ಹಾಗೂ ಮದನ್(20) ಮೃತ ವಿದ್ಯಾರ್ಥಿಗಳು.
ದೇವನಹಳ್ಳಿಯ ಕಾಲೇಜ್ವೊಂದರಿಂದ ಟಿಟಿ ವಾಹನದಲ್ಲಿ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಮಂತ್ರಾಲಯ ಪ್ರವಾಸಕ್ಕೆ ಬಂದಿದ್ದರು. ಮಂತ್ರಾಲಯ ದಲ್ಲಿ ರಾಯರ ದರ್ಶನ ಪಡೆದು ಎಲೆಬಿಚ್ಚಾಲಿಯ ರಾಯರ ಜಪದ ಕಟ್ಟೆ ವೀಕ್ಷಣೆ ಮಾಡಿದ ಬಳಿಕ ವಿದ್ಯಾರ್ಥಿಗಳು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದಾರೆ.
ಈ ವೇಳೆ ನೀರಿನ ರಭಸಕ್ಕೆ ಇಬ್ಬರು ವಿದ್ಯಾರ್ಥಿಗಳು ಕೊಚ್ಚಿಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಯರಗೇರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದಾರೆ.
ಮೃತದೇಹಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.