ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ತೆರಳಿದ್ದು, ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಪರಶುರಾಮ ವಡ್ಡರ ಮತ್ತು ಬಸವರಾಜ ಬಡಿಗೇರ ಮೃತಪಟ್ಟ ವಿದ್ಯಾರ್ಥಿಗಳು. ಒಬ್ಬ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಪರಶುರಾಮ ವಡ್ಡರ, ಬೆಳದಡಿ ಗ್ರಾಮದ ಬಸವರಾಜ ಬಡಿಗೇರ, ಮತ್ತೊಬ್ಬ ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದರು. ಶಾಲೆ ಮುಗಿಸಿಕೊಂಡು ಕೆರೆಯಲ್ಲಿ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ.
ವಿದ್ಯಾರ್ಥಿನಿಯರಿಗೆ ಶಾಲೆಯ ಮಾಲೀಕನ ಕಿರುಕುಳ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಶಾಲೆಯ ಮಾಲೀಕ ಧನಂಜಯ್ ಮತ್ತು ಪತ್ನಿ ಶೈಲಜಾ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಪೋಕ್ಸೋ ಕಾಯ್ದೆಯಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಲೀಕ ಧನಂಜಯ್ ರಾತ್ರಿ ಮದ್ಯದ ಅಮಲಿನಲ್ಲಿ ಬಾಲಕಿಯರ ಕೊಠಡಿಗೆ ತೆರಳಿ, ಒಮ್ಮೊಮ್ಮೆ ವಾರ್ಡನ್ ಕೊಠಡಿಗೆ ಕರೆಸಿ ಕಿರುಕುಳ ನೀಡುತ್ತಿದ್ದ. ಸಹಿಸಲಾಗದ ಮಕ್ಕಳು ಆತನ ಪತ್ನಿ ಶೈಲಜಾಗೆ ಈ ಬಗ್ಗೆ ಹೇಳಿದ್ದರು. ಆದರೆ ಆಕೆ ಕಿರುಕುಳದ ಬಗ್ಗೆ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಸತಿ ಶಾಲೆಯಲ್ಲಿ ನಡೆದ ದೌರ್ಜನ್ಯದ ಕುರಿತು ಪಾಲಕರಿಗೆ ಸುದ್ದಿ ಮುಟ್ಟಿಸಬಾರದೆಂದು ಸತತ ಎಂಟು ದಿನ ಹೊರಗೆ ಹೋಗಲೂ ಬಿಡದೆ, ಪೋಷಕರಿಗೆ ಕರೆ ಮಾಡಲೂ ಬಿಡದೆ ಕಿರುಕುಳ ನೀಡಿದ್ದರು ಎಂದು ಬಾಲಕಿಯರು ಹೇಳಿದ್ದಾರೆ.


