ಯಲಹಂಕ ನ್ಯೂ ಟೌನ್ ಉನ್ನಿಕೃಷ್ಣನ್ ಜಂಕ್ಷನ್ ಬಳಿ ಬೈಕ್ನಲ್ಲಿ ತ್ರಿಬಲ್ ರೈಡ್ ಹೋಗುತ್ತಿದ್ದಾಗ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.ಕಿರಣ್ (25) ಮತ್ತು ಯಶವಂತ್ (25) ಮೃತಪಟ್ಟವರು.
ಬೈಕ್ನಲ್ಲಿದ್ದ ಹಿಂಬದಿ ಸವಾರ ಗೌತಮ್ ಎಂಬವರು ಗಾಯಗೊಂಡಿದ್ದಾರೆ. ಮಂಗಳವಾರ ಮಧ್ಯರಾತ್ರಿ ಮೂವರು ಬುಲೆಟ್ ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ರೈಡಿಂಗ್ ಹೊರಟಿದ್ದರು. ಆಗ ಮರಕ್ಕೆ ಡಿಕ್ಕಿಯಾಗಿ ಬೈಕ್ ಉರುಳಿದೆ.
ಬೈಕ್ ಓಡಿಸುತ್ತಿದ್ದ ಕಿರಣ್ ಸ್ಥಳದಲ್ಲೇ ಅಸು ನೀಗಿದರೆ, ಇನ್ನೊಬ್ಬ ಯುವಕ ಯಶವಂತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಗೌತಮ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗ ಸುಸೈಡ್, ತಾಯಿ ಆತ್ಮಹತ್ಯೆಗೆ ಯತ್ನ
ಬೆಂಗಳೂರು ದಕ್ಷಿಣ ಜಿಲ್ಲೆಯ ಮರಿಗೌಡನದೊಡ್ಡಿ ಗ್ರಾಮದಲ್ಲಿ ಕೌಟುಂಬಿಕ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆಯಿಂದ ನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಾವಿನ ಸುದ್ದಿ ತಿಳಿದು ತಾಯಿಯೂ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಶಾಲ್ (25) ಜಕ್ಕಸಂದ್ರ ಗ್ರಾಮದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾದ ತಾಯಿ ಗೌರಮ್ಮ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.


