Tuesday, February 17, 2026
Menu

ಹೋಟೆಲ್‌ನಲ್ಲಿ ಸ್ಕ್ವಿಡ್ ಮಸಾಲ, ಮೊಟ್ಟೆ ಮರಗೆಣಸು ಸೇವಿಸಿದ ಇಬ್ಬರ ಸಾವು

ಹೋಟೆಲ್‌ನಲ್ಲಿ ಸ್ಕ್ವಿಡ್ ಮಸಾಲೆ, ಮೊಟ್ಟೆ ಮರಗೆಣಸು ಜೊತೆ ಪರೋಟ ತಿಂದು ಊಟ ಮುಗಿಸಿ ಹೊರಟ ಕೆಲವೇ ಕ್ಷಣಗಳಲ್ಲಿ ಇಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಕೇರಳದ ವಿಳಿಂಜಂನಲ್ಲಿ ನಡೆದಿದೆ.

ವಿಳಿಂಜಂನ ‘ಅಸ್ಮಾಕ್’ ಹೋಟೆಲ್‌ನಲ್ಲಿ ಊಟ ಮಾಡಿದ್ದ ಕೊಲ್ಲಂ ನಿವಾಸಿಗಳಾದ ಶಾಜಿ ಮತ್ತು ಅವರ ಅತ್ತೆ ರಶೀದಾ ಬೀವಿ (58) ಮೃತಪಟ್ಟವರು, ಇದಕ್ಕೆ ಕಾರಣ ಫುಡ್ ಪಾಯ್ಸನಿಂಗ್ ಇರಬಹುದೇ ಅಥವಾ ಅಲರ್ಜಿಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.

ಊಟ ಮುಗಿಸಿ ವಾಪಸ್ ಬರುವಾಗ ಅವರಿಬ್ಬರು ಅಸ್ವಸ್ಥಗೊಂಡ ಬಗ್ಗೆ ಸ್ನೇಹಿತ ಕಣ್ಣನ್‌ ವಿವರಿಸಿ, ನಾವು ಮಧ್ಯಾಹ್ನ ಊಟ ಮುಗಿಸಿ ಹೋಟೆಲ್‌ನಿಂದ ಹೊರಟೆವು. ಸ್ವಲ್ಪ ಸಮಯದಲ್ಲೇ ರಶೀದಾ ಅವರಿಗೆ ಎದೆನೋವು ಕಾಣಿಸಿಕೊಂಡು ನಾಲಿಗೆ ತೊದಲಲು ಶುರುವಾ ದೇಹ ನಿತ್ರಾಣಗೊಂಡಿತು. ಕುಡಿಯಲು ನೀರು ಕೇಳಿದರು,ನಾವು ಅವರಿಗೆ ಬ್ಲ್ಯಾಕ್ ಟೀ ಕೊಡಿಸಿದೆವು. ಅಷ್ಟರಲ್ಲಿ ಶಾಜಿ ವಾಂತಿ ಮಾಡಲು ಆರಂಭಿಸಿದರು. ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾ ಯಿತು. ರಶೀದಾ ಬೀವಿ ಅವರನ್ನು ಪಾರಿಪಳ್ಳಿ ಮೆಡಿಕಲ್ ಕಾಲೇಜಿಗೆ ಮತ್ತು ಶಾಜಿ ಅವರನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದ್ದು, ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ ಎಂದು ಹೇಳಿದ್ದಾರೆ.

ಶಾಜಿ ಪತ್ನಿ ಸಜೀನಾಗೂ ಇದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡಿದ್ದು, ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲು ಅವರನ್ನು ಪಾರಿಪಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಸ್ಥಿತಿ ಗಂಭೀರವಾದ ಕಾರಣ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜೊತೆಗಿದ್ದ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಿಲ್ಲ.

ವಿಳಿಂಜಂ ಪೊಲೀಸರು ಮತ್ತು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‘ಅಸ್ಮಾಕ್’ ಹೋಟೆಲ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಆಹಾರದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *