ಧಾರವಾಡದ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಸುರೇಶ ತುಪ್ಪದ (52), ಮಹಾಂತಪ್ಪ ತುಪ್ಪದ (65) ಮೃತಪಟ್ಟವರು. ಗದಗ ಮೂಲದ ಕುಟುಂಬವು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿದ್ದರು. ಕೊಲ್ಲಾಪುರದಿಂದ ವಾಪಸಾಗುತ್ತಿದ್ದಾಗ ಮುಲ್ಲಾ ಧಾಬಾ ಬಳಿ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದಿದೆ.
ಗಾಯಾಳುಗಳಿಗೆ ಧಾರವಾಡ ಜಿಲ್ಲಾ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆ ಬಿಟ್ಟಿದ್ದ ವ್ಯಕ್ತಿ ಅಸ್ಥಿಪಂಜರವಾಗಿ ಪತ್ತೆ
ಎರಡು ವರ್ಷದ ಹಿಂದೆ ಮನೆ ಬಿಟ್ಟಿದ್ದ ವ್ಯಕ್ತಿ ಬೆಂಗಳೂರಿನ ಕೊತ್ತನೂರು ಠಾಣೆ ವ್ಯಾಪ್ತಿಯ ದೊಡ್ಡಗುಬ್ಬಿ ಬಳಿ ಅಸ್ಥಿಪಂಜರವಾಗಿ ಪತ್ತೆಯಾಗಿದ್ದು, ಧರಿಸಿದ್ದ ಟೀ-ಶರ್ಟ್ ಮತ್ತು ಹಲ್ಲು ಸೆಟ್‌ನಿಂದ ಗುರುತು ಪತ್ತೆಯಾಗಿದೆ.
ದೊಡ್ಡಗುಬ್ಬಿ ಬಳಿ ಪಾಳು ಬಿದ್ದ ಅಪಾರ್ಟ್ಮೆಂಟ್‌ನಲ್ಲಿ ಕಾರ್ಮಿಕ ಕ್ಲೀನ್ ಮಾಡ್ತಿದ್ದಾಗ ಕಿರುಚುತ್ತಾ ಕಟ್ಟಡದಿಂದ ಹೊರಗೆ ಓಡಿಬಂದಿದ್ದ. ಎಲ್ಲರೂ ಒಳಗೆ ಹೋಗಿ ನೋಡಿದಾಗ ಮಲಗಿದ್ದ ಸ್ಥಿತಿಯಲ್ಲೇ ವ್ಯಕ್ತಿಯ ಅಸ್ತಿಪಂಜರವೊಂದು ಪತ್ತೆಯಾಗಿತ್ತು. ಕೊತ್ತನೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು.
ಅಸ್ತಿಪಂಜರದ ಜೊತೆ ಸಿಕ್ಕ ವ್ಯಕ್ತಿಯ ಬಟ್ಟೆ, ಚಪ್ಪಲಿ ಮತ್ತು ತಲೆಬುರುಡೆ ಜೊತೆ ಸಿಕ್ಕ ಹಲ್ಲಿನ ಸೆಟ್ ಎಫ್‌ಎಸ್‌ಎಲ್‌ಗೆ ಕಳಿಸಿದ್ದರು. ಎರಡು ವರ್ಷದ ಹಿಂದೆ ಸತ್ತಿರಬಹುದು ಎಂದು ವರದಿ ಬಂದಿತ್ತು. ಎರಡು ವರ್ಷದ ಹಿಂದೆ ಆ ಟೀ-ಶರ್ಟ್ ಮತ್ತು ಹವಾಯ್ ಚಪ್ಪಲಿ ಹಾಕಿದ ವ್ಯಕ್ತಿ ಕಾಣೆಯಾದ ದೂರು ಇದೆಯಾ ಎಂದು ಚೆಕ್ ಮಾಡಿದಾಗ, ಅವಲಹಳ್ಳಿ ಠಾಣೆಯಲ್ಲಿ ಸ್ಟೈಲ್ ಯೂನಿಯನ್ ಟೀ-ಶರ್ಟ್ ಧರಿಸಿದ್ದ ವ್ಯಕ್ತಿ ಕಾಣೆಯಾಗಿದ್ದ ದೂರು ದಾಖಲಾಗಿತ್ತು.
ದೂರುದಾರನನ್ನ ಕರೆಸಿ ಕೊತ್ತನೂರು ಪೊಲೀಸರು ಮಾಹಿತಿ ಪಡೆದಾಗ ಅಸ್ಥಿಪಂಜರವಾಗಿ ಸಿಕ್ಕ ವ್ಯಕ್ತಿಯ ಗುರುತು ಪತ್ತೆಯಾಗಿದೆ. 69 ವರ್ಷದ ಸೋಮಯ್ ಅಸ್ಥಿ ಪಂಜರವಾಗಿ ಸಿಕ್ಕವರು. 2023 ರಲ್ಲಿ ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರಲಿಲ್ಲ. ತಂದೆ ಕಾಣೆಯಾಗಿದ್ದಾರೆ ಎಂದು ಮಗ ಕಿರಣ್ ದೂರು ನೀಡಿದ್ದರು.