ಮಕ್ಕಳು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ಬೆಳಗಾವಿ ತಾಲೂಕಿನ ಹಲಗಾ ಗ್ರಾಮಸ್ಥರು ಒಂದು ಕ್ರಾಂತಿಕಾರಿ ಮತ್ತು ಮಾದರಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದೇ ‘ಡಿಜಿಟಲ್ ಆಫ್’ ಪ್ರಯೋಗ.
ಎಲ್ಲರೂ ಮೊಬೈಲ್ ಮತ್ತು ಟಿವಿ ಸೇರಿದಂತೆ ಡಿಜಿಟಲ್ ವ್ಯಸನಕ್ಕೆ ಒಳಗಾಗಿದ್ದು, ಮಕ್ಕಳ ಓದಿನ ಮೇಲೆ ಮತ್ತು ಕೌಟುಂಬಿಕ ಸಂಬಂಧಗಳ ಮೇಲೆ ಗಂಭೀರವಾದ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದನ್ನು ಮನಗಂಡ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಸಣ್ಣ ಮಟ್ಟಿನ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
ಮಹಾರಾಷ್ಟ್ರದ ಹಳ್ಳಿಯೊಂದರ ಮಾದರಿಯನ್ನು ಅನುಸರಿಸಿ ಹಲಗಾ ಗ್ರಾಮಸ್ಥರು, ಪ್ರತಿದಿನ ಸಂಜೆ 2 ಗಂಟೆ ಯಾವುದೇ ಡಿಜಿಟಲ್ ಸಾಧನಗಳನ್ನು ಬಳಸದಿರಲು ನಿರ್ಧರಿಸಿದ್ದಾರೆ. ಡಿಸೆಂಬರ್ 17 ರಿಂದ ಅಧಿಕೃತವಾಗಿ ಆರಂಭವಾಗಿರುವ ಈ ಜಾಗೃತಿ ಅಭಿಯಾನದ ಅನ್ವಯ, ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗ್ರಾಮದ ಎಲ್ಲ ಮನೆಗಳಲ್ಲಿ ಮೊಬೈಲ್ ಮತ್ತು ಟಿವಿಗಳನ್ನು ಸ್ವಿಚ್ ಆಫ್ ಮಾಡಲಾಗುತ್ತದೆ.
ಗ್ರಾಮ ಪಂಚಾಯಿತಿಯ ವತಿಯಿಂದ ಪ್ರತಿದಿನ ಸಂಜೆ 7 ಗಂಟೆಗೆ ಸರಿಯಾಗಿ ಗ್ರಾಮದಲ್ಲಿ ಸೈರನ್ ಮೊಳಗಿಸಲಾಗುತ್ತದೆ. ಈ ಸೈರನ್ ಕೇಳುತ್ತಿದ್ದಂತೆಯೇ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಟಿವಿ ಆಫ್ ಮಾಡುತ್ತಾರೆ ಮತ್ತು ಮೊಬೈಲ್ ಪಕ್ಕಕ್ಕಿಡುತ್ತಾರೆ. ರಾತ್ರಿ 9 ಗಂಟೆಗೆ ಸೈರನ್ ಮೊಳಗಿದ ನಂತರವಷ್ಟೇ ಡಿಜಿಟಲ್ ಸಾಧನಗಳ ಬಳಕೆ ಮಾಡುತ್ತಾರೆ.
ದಿನದ ಎರಡು ಗಂಟೆಗಳ ಅವಧಿಯನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಡಲಾಗಿದೆ. ಪೋಷಕರು ಮಕ್ಕಳ ಜೊತೆ ಕುಳಿತು ಅಧ್ಯಯನದ ಕಡೆ ಗಮನ ಹರಿಸುತ್ತಾರೆ. ಮೊಬೈಲ್ ಕಿರಿಕಿರಿ ಇಲ್ಲದ ಕಾರಣ ಮಕ್ಕಳು ಏಕಾಗ್ರತೆಯಿಂದ ಓದುತ್ತಿದ್ದಾರೆ. ಓದಿನ ಜೊತೆಗೆ ಹಿರಿಯರೊಂದಿಗೆ ಕಾಲ ಕಳೆಯುವ, ಸಾಂಸ್ಕೃತಿಕ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಸಿಗುತ್ತಿದೆ.
ಗ್ರಾಮ ಪಂಚಾಯಿತಿಯ ಈ ನಿರ್ಧಾರಕ್ಕೆ ಇಡೀ ಗ್ರಾಮ ಕೈ ಜೋಡಿಸಿದೆ. ‘ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ್ತು ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣಕ್ಕಾಗಿ ಈ ನಿರ್ಧಾರ ಅವಶ್ಯಕವಾಗಿತ್ತು’ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಹಲಗಾ ಗ್ರಾಮದ ಈ ಪ್ರಯತ್ನ ರಾಜ್ಯದ ಇತರ ಗ್ರಾಮಗಳಿಗೂ ಮಾದರಿಯಾಗಬೇಕಿದೆ.


