ಉಡುಪಿ ಜಿಲ್ಲೆಯ ಕೋಡಿಬೇಂಗ್ರೆಯ ಡೆಲ್ಟಾ ಬೀಚ್ ಬಳಿ ಸೋಮವಾರ ಬೆಳಿಗ್ಗೆ ಪ್ರವಾಸಿ ದೋಣಿ ಸಮುದ್ರ ಮಧ್ಯೆ ಮಗುಚಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಹಲವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೈಸೂರಿನ ಸರಸ್ವತಿ ಪುರಂ ನಿವಾಸಿಗಳಾದ ಶಂಕರಪ್ಪ (22) ಮತ್ತು ಸಿಂಧು (23) ಮೃತಪಟ್ಟಿದ್ದು, ದಿಶಾ (26) ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮರಾಜ್ (26) ಎಂಬವರು ಚಿಕಿತ್ಸೆಗೆ ಸ್ಪಂದಿಸಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ವಿಹಾರಕ್ಕೆ ಬಂದಿದ್ದ ಮೈಸೂರು ಕಾಲ್ ಸೆಂಟರ್ ನ 28 ಮಂದಿ
ಮೈಸೂರಿನ ಕಾಲ್ ಸೆಂಟರ್ ನ ಉದ್ಯೋಗಿಗಳ 28 ಮಂದಿಯ ತಂಡ ಪ್ರವಾಸಕ್ಕೆ ಬಂದಿದ್ದು, ರೆಸಾರ್ಟ್ ನಲ್ಲಿ ಉಳಿದಿದ್ದ 14 ಮಂದಿ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು.
ಸಮುದ್ರದ ಅಲೆಗಳಿಗೆ ಸಿಕ್ಕ ದೋಣಿ ಮಗುಚಿಕೊಂಡಿದ್ದು, ಎಲ್ಲರೂ ನೀರಿಗೆ ಬಿದ್ದಿದ್ದಾರೆ. ಇದರಲ್ಲಿ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಆದರೆ, ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸಮುದ್ರದಲ್ಲಿ ದೋಣಿ ಸಂಚಾರಕ್ಕೆ ಅನುಮತಿ ಪಡೆಯಲಾಗಿರಲಿಲ್ಲ. ಅಲ್ಲದೇ ಜೀವ ರಕ್ಷಕ ಜಾಕೆಟ್ ಕೂಡ ನೀಡಲಾಗಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಇನ್ನೋರ್ವನ ಸ್ಥಿತಿ ಸ್ಥಿರವಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.


