ಕಟ್ಟಡ ಕಾಮಗಾರಿ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಲಿಫ್ಟ್ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ. ಪ್ರಭಾಕರ್ ಮುತ್ತಪ್ಪ ಶೆಟ್ಟಿ, ಬಾಬಣ್ಣ ಪೂಜಾರಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಣೆಗಾಗಿ ಅಳವಡಿಸಲಾಗಿದ್ದ ತಾತ್ಕಾಲಿಕ ಲಿಫ್ಟ್ ಕುಸಿದು ಈ ದುರಂತ ಸಂಭವಿಸಿದೆ. ಮುರ್ಡೇಶ್ವರದ ಓಲಗ ಮಂಟಪದ ಸಮೀಪ ನಾಲ್ಕು ಮಹಡಿಗಳ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದ್ದು, ಸಾಮಗ್ರಿಗಳನ್ನು ಸಾಗಿಸಲು ತಾತ್ಕಾಲಿಕ ಲಿಫ್ಟ್ ಅಳವಡಿಸಲಾಗಿತ್ತು. ಅತಿ ಭಾರ ಬಿದ್ದ ಕಾರಣ ಹಗ್ಗ ತುಂಡಾಗಿ ಲಿಫ್ಟ್ ನೆಲಕ್ಕೆ ಕುಸಿದಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕಟ್ಟಡ ನಿರ್ಮಾಣದ ವೇಳೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದರೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಶೀಲ ಶಂಕಿಸಿ ಪತ್ನಿಯ ಹತ್ಯೆ
ಬೆಂಗಳೂರಿನ ಅಮೃತಹಳ್ಳಿಯ ಗಂಗಮ್ಮ ಲೇಔಟ್‌ನಲ್ಲಿ ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಪಾವಗಡ ಮೂಲದ ಅಂಜಲಿ (20) ಕೊಲೆಯಾದ ಮಹಿಳೆ. ಪತಿ ರವಿಚಂದ್ರ ಕೊಲೆಗೈದ ಆರೋಪಿ. ಅಂಜಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆರೋಪಿ ಟ್ರಾವೆಲ್ಸ್ ಕಚೇರಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.
ಅಂಜಲಿ ಸುರಪುರ ಮೂಲದ ರವಿಚಂದ್ರನ ಜೊತೆ ಮಹಿಳೆ 2ನೇ ಮದುವೆಯಾಗಿದ್ದಳು. ಮದುವೆ ನಂತರ ಅಮೃತಹಳ್ಳಿಯಲ್ಲಿ ವಾಸವಿದ್ದರು. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ರವಿಚಂದ್ರನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


