ಬೆಂಗಳೂರಿನಲ್ಲಿ ಕಂಠಪೂರ್ತಿ ಕುಡಿದು ಕಾರು ಚಾಲನೆ ಮಾಡಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬನ್ನೇರುಘಟ್ಟ ಸಮೀಪ ರಾಗಿಹಳ್ಳಿ ಬಳಿ ನಡೆದಿದೆ.
ಕೇರಳ ಮೂಲದ ಸಹಾಹುಕ್ (28) ಮತ್ತು ಅರ್ಶು (23) ಮೃತ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ದೇವ ನಾರಾಯಣ (23) ಮತ್ತು ಸಾಹಿಲ್ (23) ಗಂಭೀರವಾಗಿ ಗಾಯಗೊಂಡವರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿದ್ದ ನಾಲ್ವರೂ ಗೊಟ್ಟಿಗೆರೆಯ ಕಾಲೇಜೊಂದರ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಅತಿವೇಗವಾಗಿ ಬಂದು ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಛಿದ್ರಗೊಂಡಿದೆ. ಈ ನಾಲ್ವರು ರಾತ್ರಿ ಪಾರ್ಟಿ ಮಾಡಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.