Menu

ಗದಗ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್: ದೂರು ನೀಡಿದ್ದ ಗಂಡನ ವಿರುದ್ಧವೇ ದೂರು!

love jihad

ಗದಗ್: ಮದುವೆ ನೆಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಿದ್ದಾರೆ ಎಂಬ ಭಾರೀ ಸದ್ದು ಮಾಡುತ್ತಿರುವ ಲವ್‌ ಜಿಹಾದ್‌ ಪ್ರಕರಣಕ್ಕೆ ಟ್ವಿಸ್ಟ್‌ ಲಭಿಸಿದ್ದು, ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಜಿಲ್ಲೆಯ ಬೆಟಗೇರಿಯ ಸೆಟ್ಮೆಂಟ್ ಪ್ರದೇಶದ ಯುವಕ ವಿಶಾಲ ಕುಮಾರ್​ನನ್ನು ಮದುವೆ ನೆಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿದ್ದ. ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಮಸೀದಿಯಲ್ಲಿ ನನ್ನನ್ನು ಮತಾಂತರ ಮಾಡಿಸಿದ್ದಾರೆ. ಜೊತೆ ನನಗೆ ಗೊತ್ತಿಲ್ಲದೇ ಹೆಸರು ಕೂಡ ವಿರಾಜ್ ಸಾಬ್ ಅಂತ ಬದಲಿಸಿದ್ದಾರೆ ಎಂದು ಆರೋಪಿಸಿದ್ದ.

ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದ. ಈಗ ಪತಿ ವಿಶಾಲ್ ವಿರುದ್ಧ ಈಗ ಯುವತಿ ಪೋಸ್ಕೋ ಪ್ರಕರಣ ದಾಖಲು ಮಾಡಿದ್ದು, ಪ್ರಕರಣಕ್ಕೆ ಟ್ವಿಸ್ಟ್‌ ಲಭಿಸಿದೆ.

17 ವರ್ಷದವಳಾಗಿದ್ದಾಗ ನನ್ನ ಜತೆ ಬಲವಂತಾಗಿ ದೈಹಿಕ ಸಂಪರ್ಕ ಮಾಡಿ ವಿಶಾಲ್ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ ಎಂದು ಯುವತಿ ಗದಗ ಮಹಿಳಾ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾಳೆ ಎಂದು ಎಸ್​ಪಿ ತಿಳಿಸಿದ್ದಾರೆ.​‌ ಪ್ರಕರಣ ಮತ್ತಷ್ಟು ಕಗ್ಗಂಟಾಗುತ್ತಿರುವುದರಿಂದ ಪೊಲೀಸರು ಎರಡೂ ಕುಟುಂಬಗಳಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಹಿನ್ನೆಲೆ

ವಿಶಾಲ್ ಕುಮಾರ್ ಹಾಗೂ ಮುಸ್ಲಿಂ ಧರ್ಮದ ಯುವತಿ ಕಳೆದ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮದ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದ ಜೋಡಿ, 2024ರ ನವೆಂಬರ್ 26 ನೇ ತಾರೀಕು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ನಂತರ, ರಿಜಿಸ್ಟರ್ ವಿಷಯ ಯುವತಿಯ ಕುಟುಂಬಕ್ಕೆ ಗೊತ್ತಾಗಿದೆ. ಆ ಬಳಿಕ, ಮುಸ್ಲಿಂ ಸಂಪ್ರದಾಯದಂತೆಯೇ ಮದುವೆಗೆ ಮಾಡಿಕೊಳ್ಳಲು ವಿಶಾಲ್ ಬಳಿ ಯುವತಿ ಕುಟುಂಬ ದುಂಬಾಲು ಬಿದ್ದಿತ್ತು. ಪ್ರೀತಿಸಿದ್ದ ಯುವತಿಗಾಗಿ ಮದುವೆಗೆ ಒಪ್ಪಿಕೊಂಡಿದ್ದ ವಿಶಾಲ್ ಕುಮಾರ್, 2025ರ ಏಪ್ರಿಲ್ 25 ನೇ ತಾರೀಕು ಮುಸ್ಲಿಂ ಸಂಪ್ರದಾಯದಂತೆ ನಿಖಾ ಮಾಡಿಕೊಂಡಿದ್ದ.

ವಿಶಾಲ್​ಗೆ ಅರಿವಿಲ್ಲದೇ ನಿಖಾ ನಾಮದಲ್ಲಿ ಆತನ ಹೆಸರನ್ನು ವಿರಾಜ್ ಸಾಬ್ ಎಂದು ದಾಲಿಸಲಾಗಿತ್ತು ಎಂದು ಆರೋಪಿಸಲಾಗಿತ್ತು. ನಿಖಾ ದಫ್ತರ್​ನಲ್ಲಿ, ಅಂದರೆ ಮದುವೆಯ ನೋಂದಣಿಯಲ್ಲಿ ಬದಲಾದ ಹೆಸರನ್ನು ಉರ್ದುವಿನಲ್ಲಿ ಬರೆಯಲಾಗಿತ್ತು. ಅನ್ಯ ಧರ್ಮಕ್ಕೆ ಮತಾಂತರ ಮಾಡಿರುವ ಬಗ್ಗೆ ಗೊತ್ತಾಗುತ್ತಿದಂತೆಯೇ ಯುವಕ ವಿಶಾಲ್, ಮೋಸದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪತ್ನಿ, ಅವಳ ತಂದೆ-ತಾಯಿಯ ವಿರುದ್ದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಪತ್ನಿಯೇ ಈಗ ಪೋಸ್ಕೋ ದೂರು ನೀಡಿದ್ದಾಳೆ. ಯುವತಿಯ ಆರೋಪವನ್ನು ವಿಶಾಲ್ ತಳ್ಳಿಹಾಕಿದ್ದಾರೆ.

ಪತ್ನಿಯೇ ಮುಸ್ಲಿಂ ಧರ್ಮಕ್ಕೆ ಬಲವಂತದ ಮತಾಂತರ ಮಾಡಿದ್ದು, ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿಶಾಲ್ ಮನವಿ ಮಾಡಿದ್ದಾರೆ. ಅತ್ತ ಪತ್ನಿ ಕೂಡ, ಅಪ್ರಾಪ್ತೆ ಆಗಿದ್ದಾಗ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದನೆಂದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತದೆಯೋ ಕಾದು ನೋಡಬೇಕಿದೆ.

Related Posts

Leave a Reply

Your email address will not be published. Required fields are marked *