ಕರ್ನಾಟಕ ಬಿಜೆಪಿ ಮತ್ತು ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕುತೂಹಲಕಾರಿ ಟ್ವೀಟ್ ಸಮರ ನಡೆದಿದೆ. ಪ್ರಿಯಾಂಕ್ ಖರ್ಗೆಯವರು ತಮ್ಮ ಇಲಾಖೆಗೆ ಸಂಬಂಧ ಪಡದ ವಿಚಾರಕ್ಕೂ ಮೂಗು ತೂರಿಸುತ್ತಾರೆ ಎಂದು ಆರೋಪಿಸಿರುವ ಕರ್ನಾಟಕ ಬಿಜೆಪಿ, ಅವರ ವಿರುದ್ಧ ವ್ಯಂಗ್ಯಭರಿತ ಟ್ವೀಟ್‌ಗಳನ್ನು ಹಂಚಿಕೊಂಡಿದೆ, ಇದಕ್ಕೆ ಖರ್ಗೆ ತಿರುಗೇಟು ನೀಡುತ್ತಿದ್ದಾರೆ.
“ತಮಗೆ ಸಂಬಂಧಿಸದ ವಿಷಯಗಳಿಗೆಲ್ಲ ಮೂಗು ತೂರಿಸಿ ಟ್ವೀಟ್ ಮಾಡುವ “ಟ್ವೀಟಾಸುರ” ಅಲಿಯಾಸ್ ಪ್ರಿಯಾಂಕ್ ಖರ್ಗೆ ಅವರು, ತಮ್ಮ ಸ್ವಂತ ಉಸ್ತುವಾರಿ ಜಿಲ್ಲೆಯಾದ ಕಲ್ಬುರ್ಗಿಯಲ್ಲಿ ಪ್ರವಾಹ ಉಂಟಾದರೂ ಕನಿಷ್ಠ ಒಂದು ಟ್ವೀಟ್ ಸಹ ಮಾಡದೆ ಕಾಣೆಯಾಗಿದ್ದಾರೆ. ಇವರು ಕಂಡ ತಕ್ಷಣ ಕಲ್ಬುರ್ಗಿಯಲ್ಲಿ ಪ್ರವಾಹವಾಗಿದೆ ಎಂದು ಮಾಹಿತಿ ನೀಡಿ” ಎಂದು ಬಿಜೆಪಿಯ ಐಟಿ ಸೆಲ್ ಟ್ವೀಟ್ ಮಾಡಿದೆ.
ಮುಂದುವರಿಯುತ್ತಾ, ಪ್ರಿಯಾಂಕ್ ಖರ್ಗೆಯವರ ಫೋಟೋ ಸಮೇತ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ’ವಿ.ಸೂ : ಗೋದಿ ಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿರುವ ಇವರು, ಸದಾ ಕೆಲಸಕ್ಕೆ ಬಾರದ ವಿಷಯದ ಕುರಿತು ಟ್ವೀಟ್ ಮಾಡುತ್ತಿರುತ್ತಾರೆ. ಹಾಗೂ ಸದಾ, ಚೀಫ್.. ಚೀಫ್.. ಎಂದು ಗೊಣಗುತ್ತಿರುತ್ತಾರೆ. ಇವರನ್ನು ಕಂಡ ತಕ್ಷಣ ಕಲಬುರ್ಗಿಯಲ್ಲಿ ಪ್ರವಾಹವಾಗಿದೆ ಎಂದು ಮಾಹಿತಿ ನೀಡಿ’, ಎಂದು
ಪೋಸ್ಟರ್ ಹಾಕಿದೆ.
ಬಿಜೆಪಿಯ ಟ್ವೀಟಿಗೆ ಖಾರವಾಗಿ ಉತ್ತರಿಸಿರುವ ಪ್ರಿಯಾಂಕ್ ಖರ್ಗೆ ‘ಕರ್ನಾಟಕ ಬಿಜೆಪಿ ಪಕ್ಷದಲ್ಲಿ ಯಾರಿಗಾದರೂ ಬಡ್ತಿ ಬೇಕಾದಾಗಲೆಲ್ಲ ಅವರು ನನ್ನ ಹೆಸರನ್ನು ಜಪಿಸುತ್ತಾ, RSS ಪಾಠಶಾಖೆಯಲ್ಲಿ ಕಲಿತ ಸುಳ್ಳು ಹಬ್ಬಿಸುವ ವಿದ್ಯೆಯ ಮೊರೆ ಹೋಗುತ್ತಾರೆ’ ಎಂದು ಹೇಳಿದ್ದಾರೆ.
“ಕರ್ನಾಟಕವು ಪ್ರವಾಹ ಎದುರಿಸುವಾಗಲೆಲ್ಲಾ ಕಾಣೆಯಾಗುವುದು ಮೋದಿ ಸರ್ಕಾರದ ನೆರವು ಹೊರತು ಬೇರೇನೂ ಅಲ್ಲ. ಮೋದಿ ಸರ್ಕಾರದ ನಿರ್ದಯ ನೀತಿಗೆ ರಾಜ್ಯದಲ್ಲಿ ಯಾವ ಸರ್ಕಾರವಿದ್ದರೂ ಬೇಧವಿಲ್ಲ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿಯಾದಾಗಲೂ ಮೋದಿಯವರಿಗೆ ಕರ್ನಾಟಕ ಕಾಣಿಸಿರಲಿಲ್ಲ, ಈಗಲೂ ಕಾಣಿಸುತ್ತಿಲ್ಲ. ರಾಜ್ಯ ಬಿಜೆಪಿಯವರಿಗೆ ಜನರ ಬಗ್ಗೆ ನೈಜ ಕಾಳಜಿ ಇದ್ದರೆ ಕಾಣೆಯಾಗಿರುವ ಕೇಂದ್ರ ಸರ್ಕಾರದ ನೆರವನ್ನು, ಕಾಣೆಯಾಗಿರುವ ಕೇಂದ್ರ ಸರ್ಕಾರದ ಮಾನವೀಯತೆಯನ್ನು ಹುಡುಕಿ ತರಲಿ” ಎಂದು ಖರ್ಗೆ ಠಕ್ಕರ್ ಕೊಟ್ಟಿದ್ದಾರೆ.
“ಹೆಚ್ಚುವರಿ ಮಾಹಿತಿ: ನಿಮ್ಮ ಕಾರ್ಯಕರ್ತರು ಮತ್ತು ನಿಮ್ಮ ಪಕ್ಷದ ಬ್ಲಾಕ್ ಅಧ್ಯಕ್ಷರು ಸೆಪ್ಟೆಂಬರ್ 17 ರಂದು ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಮತ್ತು ನನ್ನನ್ನು ಭೇಟಿ ಮಾಡಿ, ಬೆಳೆ ವಿಮೆಯಲ್ಲಿ ರೈತರಿಗೆ 650 ಕೋಟಿಗೂ ಹೆಚ್ಚು ಪರಿಹಾವನ್ನು ನೀಡಿದ್ದಕ್ಕೆ, ನಮಗೆ ಅಭಿನಂದನೆ ಸಲ್ಲಿಸಿದರು. ಅಂದಹಾಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲಬುರ್ಗಿಯ ಉಸ್ತುವಾರಿ ಸಚಿವರು ಯಾರಿದ್ದರು?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.