ಕೇಂದ್ರ ಸರ್ಕಾರದ ಆದೇಶದಂತೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್ ಏರ್ಪೋರ್ಟ್ ಸೇವೆಗಳನ್ನು ಸ್ಥಗಿತಗೊಳಿಸುವ ಮೂಲಕ ಬೆಂಗಳೂರಿನಲ್ಲಿಯೂ ಟರ್ಕಿ ಕಂಪನಿಗೆ ಭಾರಿ ಹೊಡೆತ ನೀಡಿದಂತಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ 15 ಅಂತಾರಾಷ್ಟ್ರೀಯ ವಿಮಾನಗಳು ಮತ್ತು ಕಾರ್ಗೋ ವಿಮಾನಗಳನ್ನು ಸೆಲೆಬಿ ಏವಿಯೇಷನ್ ನಿರ್ವಹಣೆ ಮಾಡುತ್ತಿತ್ತು. ಅವುಗಳನ್ನು ಬೇರೆ ಏರ್ ಸರ್ವೀಸಸ್ ಕಂಪನಿಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.
ಟರ್ಕಿಯ ಸೆಲೆಬಿ ಏವಿಯೇಷನ್ ಕಂಪನಿಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 500 ಕ್ಕೂ ಅಧಿಕ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಇದೀಗ ಆ ಸಿಬ್ಬಂದಿಯನ್ನು ಬೇರೆ ಏಜೆನ್ಸಿಗಳಿಗೆ ವರ್ಗಾವಣೆ ಮಾಡಲಾಗಿದೆ. ಸೆಲೆಬಿ ಏವಿಯೇಷನ್ ನಿರ್ವಹಿಸುತ್ತಿದ್ದ ಕೆಲಸವನ್ನು ಬೇರೆ ಸಂಸ್ಥೆಗಳಿಗೆ ನೀಡಿರುವುದಾಗಿ ವಿಮಾನ ನಿಲ್ದಾಣ ಆಡಳಿತ ಸ್ಪಷ್ಟನೆ ನೀಡಿದೆ.
ಸೆಲೆಬಿ ಏವಿಯೇಷನ್ ಬೆಂಗಳೂರು, ದೆಹಲಿ ಮತ್ತು ಮುಂಬೈ ಸೇರಿದಂತೆ ಒಂಬತ್ತು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಾಗರಿಕ ವಿಮಾನಯಾನ ಸಚಿವಾಲಯದ ಭದ್ರತಾ ವಿಭಾಗವಾದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಸೆಲೆಬಿ ಏವಿಯೇಷನ್‌ನ ಪರವಾನಗಿ ರದ್ದುಗೊಳಿಸಿ ತಕ್ಷಣದಿಂದಲೇ ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಆ ಕಂಪನಿಯ ಸೇವೆ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.
ಸೆಲೆಬಿ ಏವಿಯೇಷನ್ ಟರ್ಕಿಯಲ್ಲಿ 1958 ರಲ್ಲಿ ಸ್ಥಾಪನೆಯಾಗಿದೆ. ವಿಶ್ವದಾದ್ಯಂತ 70 ಸ್ಥಳಗಳಿಗೆ ಕಾರ್ಯಾಚರಣೆ ವಿಸ್ತರಿಸಿದೆ. ಗ್ರೌಂಡ್ ಹ್ಯಾಂಡ್ಲಿಂಗ್ ಆಪರೇಷನ್, ಸರಕು ಮತ್ತು ಗೋದಾಮಿನ ನಿರ್ವಹಣೆ ಮತ್ತು ಸಾಮಾನ್ಯ ವಾಯುಯಾನ ಬೆಂಬಲ ಸೇವೆಗಳನ್ನು ಒದಗಿಸುತ್ತಿದೆ. ಸೆಲೆಬಿ ಏವಿಯೇಷನ್ ಭಾರತದ ವೈಮಾನಿಕ ಕ್ಷೇತ್ರದಲ್ಲಿ ಗಮನಾರ್ಹ ಪಾತ್ರ ಹೊಂದಿದೆ.