“ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರೆಸ್ಟ್ ಗೇಟ್ ಗಳನ್ನು ಬದಲಾವಣೆ ಮಾಡಲು ತುಂಗಭದ್ರಾ ಮಂಡಳಿಯವರು ಟೆಂಡರ್ ಕರೆದಿದ್ದಾರೆ. ಈಗಾಗಲೇ ಅಹಮದಾಬಾದ್ ಸಂಸ್ಥೆಯವರಿಗೆ ಗುತ್ತಿಗೆ ನೀಡಲಾಗಿದೆ. ಆರು ಗೇಟ್ ಗಳ ತಯಾರಿ ಕೆಲಸ ನಡೆಯುತ್ತಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
“ಈಗಾಗಲೇ ಗೇಟ್ ಗಳ ಫ್ಯಾಬ್ರಿಕೇಷನ್ ಕೆಲಸ ಪ್ರಾರಂಭವಾಗಿದೆ. ಅಗತ್ಯ ಸಲಕರಣೆಗಳು ಬರುತ್ತಿವೆ. ಗದಗ, ಹೊಸಪೇಟೆಯಲ್ಲಿ ಎರಡೆರಡು ಕಡೆ ಗೇಟ್ ಗಳ ತಯಾರಿ ಕೆಲಸ ಮುಂದುವರೆದಿದೆ. ಜಿಂದಾಲ್ ಅವರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಆಂಧ್ರ ಪ್ರದೇಶದ ಎಂಜಿನಿಯರ್ ಅವರಿಗೆ ಕೆಲಸವನ್ನು ಇನ್ನೂ ವೇಗಗೊಳಿಸಿ ಎಂದು ಸೂಚನೆ ನೀಡಿದ್ದೇನೆ. ಗೇಟ್ ತಯಾರಿಸಲು ಬೇರೆಯವರಿಗೂ ಅವಕಾಶ ನೀಡಿ, ಇದರಿಂದ ಕೆಲಸ ಬೇಗ ಆಗುತ್ತದೆ ಎಂದು ಹೇಳಿದ್ದೇನೆ” ಎಂದರು.
ಎರಡನೇ ಬೆಳೆಗೆ ನೀರಿಲ್ಲ
“ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹ ಮಾಡಬೇಕಾದ ಕಾರಣಕ್ಕೆ ಎರಡನೇ ಬೆಳೆಗೆ ಈ ವರ್ಷ ನೀರು ನೀಡಲು ಸಾಧ್ಯವಾಗುತ್ತಿಲ್ಲ. ನೀರು ಕೊಟ್ಟರೆ ಗೇಟ್ ಅಳವಡಿಕೆ ಸಾಧ್ಯವಿಲ್ಲ. ಬೆಳೆಯ ಬಗ್ಗೆ ನಮ್ಮ ರೈತರಿಗೆ ಆತಂಕವಾಗಿದೆ. ನಾನು ಸಹ ಅಧಿಕಾರಿಗಳ ಬಳಿ ಮಾತನಾಡಿದೆ. ಆಗ ಅವರು ಅಣೆಕಟ್ಟು ಮುಖ್ಯವೇ? ಬೆಳೆ ಮುಖ್ಯವೇ? ಎಂದು ಕೇಳಿದರು. ಕುಡಿಯುವ ನೀರಿಗೆ ಹಾಗೂ ಕೈಗಾರಿಕೆಗಳಿಗೆ ನಾವು ಯಥಾಸ್ಥಿತಿಯಲ್ಲಿ ನೀರು ಹರಿಸುತ್ತೇವೆ. ಸ್ಟ್ರಚ್ಚರ್ ದುರಸ್ತಿ ಕೆಲಸಗಳನ್ನು ತುರ್ತಾಗಿ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.
“ಕನ್ನಯ್ಯ ನಾಯ್ಡು ಅವರ ಸಲಹೆಯಂತೆ ಅಣೆಕಟ್ಟೆಯಲ್ಲಿ ಸಂಪೂರ್ಣ ನೀರು ಸಂಗ್ರಹ ಮಾಡದೇ 1,626 ಅಡಿ ಅಂದರೆ ಶೇ. 76 ರಷ್ಟು ನೀರು ಸಂಗ್ರಹ ಮಾಡಬೇಕು. ಒಟ್ಟು 80 ಟಿಎಂಸಿ ನೀರನ್ನು ಸಂಗ್ರಹ ಮಾಡಲು ತುಂಗಭದ್ರಾ ಮಂಡಳಿ ತೀರ್ಮಾನ ಮಾಡಿದೆ. ಈ ಮಂಡಳಿಯಲ್ಲಿ ನಮ್ಮ ರಾಜ್ಯದ ಯಾವುದೇ ಅಧಿಕಾರವಿಲ್ಲ. ಬೇರೆಯವರು ದುಡ್ಡು ನೀಡುತ್ತಾರೋ ಬಿಡುತ್ತಾರೋ, ನಾವೇ ದುಡ್ಡು ನೀಡಿ ಅಣೆಕಟ್ಟು ಉಳಿಸಿಕೊಳ್ಳಲು ತಯಾರಿದ್ದೇವೆ. ನಮ್ಮ ರೈತರ ಜೊತೆಗೆ ಅವರ ರೈತರನ್ನೂ ನಾವು ಉಳಿಸುತ್ತೇವೆ” ಎಂದರು.
ದುರಸ್ತಿ ವೆಚ್ಚ ನೀಡಲು ನಾವು ತಯಾರು, ಅವರು ತೆಗೆದುಕೊಳ್ಳುತ್ತಿಲ್ಲ
“ದುರಸ್ತಿ ವೆಚ್ಚ ಕರ್ನಾಟಕದ್ದು ಶೇ 66, ಆಂಧ್ರ ಹಾಗೂ ತೆಲಂಗಾಣ ಸೇರಿ 33 ರಷ್ಟು ಹಣ ನೀಡಬೇಕು. ಆದರೆ ಆಂಧ್ರದವರು ಹಣವನ್ನೇ ಮೀಸಲಿಟ್ಟಿರಲಿಲ್ಲ. ಅವರಿಂದ ಆನಂತರ ಹಣ ಪಡೆದರಾಯಿತು, ಅವರ ಪಾಲಿನ ಹಣವನ್ನೂ ನಾವೇ ನೀಡುತ್ತೇವೆ ಎಂದು ಅಧಿಕಾರಿಗಳಿಗೆ ಹೇಳಿದೆ. ನಾವು ದುಡ್ಡು ನೀಡಲು ಹೋದರೂ ಅವರು ತೆಗೆದುಕೊಳ್ಳಲು ತಯಾರಿಲ್ಲ. ನಮಗೆ, ನಮ್ಮ ರೈತರಿಗೆ ತೊಂದರೆಯಾಗುವುದು ಬೇಡ ಎಂದು ನಾವೇ ಹಣ ನೀಡಲು ಮುಂದಾದೆವು” ಎಂದು ಹೇಳಿದರು.
“ನವಿಲೆ ಬಳಿ ಸಮತೋಲಿತ ಅಣೆಕಟ್ಟು ನಿರ್ಮಾಣದ ಬಗ್ಗೆ ಆಂಧ್ರ ಮುಖ್ಯಮಂತ್ರಿಗಳ ಬಳಿ ಮಾತನಾಡಲು ನಾನು ಮೂರು ಭಾರಿ ಪ್ರಯತ್ನಪಟ್ಟೆ. ಆದರೆ ಸಾಧ್ಯವಾಗಲಿಲ್ಲ. ತಂಡವನ್ನು ಸಹ ಚರ್ಚೆ ನಡೆಸಲು ಕಳಿಸಿದ್ದೆ. ಆದರೆ ಅವರು ಮುಂದೆ ಬರಲಿಲ್ಲ. ಆಂಧ್ರ ಮುಖ್ಯಮಂತ್ರಿಯವರು ಏಕೆ ಸಮಯ ನೀಡಲಿಲ್ಲ ಎಂಬುದು ನನಗೆ ತಿಳಿದಿಲ್ಲ. ಏಕೆಂದರೆ ಹೆಚ್ಚಿನ ನೀರು ಅವರಿಗೆ ಹೋಗುತ್ತಿದೆಯಲ್ಲ ಎಂದು ಇರಬಹುದೇನೋ” ಎಂದರು.
“ಅಣೆಕಟ್ಟೆಯ ಸಂಗ್ರಹ ಸಾಮರ್ಥ್ಯ ಹೂಳಿನಿಂದಾಗಿ 105 ಟಿಎಂಸಿಗೆ ಕುಸಿದಿದೆ. ಆದ ಕಾರಣಕ್ಕೆ 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ನವಿಲೆ ಬಳಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ನಾವು ಯೋಜನೆ ರೂಪಿಸಿದ್ದೆವು. ಈ ಯೋಜನೆ ಅನುಮೋದನೆಗೆ ಮಂಡಳಿಯ ಮುಂದೆ 22.11.2024 ರಂದು ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೇ ಅನೇಕ ಸಭೆಗಳಲ್ಲಿ ಈ ವಿಚಾರ ಮಂಡಿಸಲಾಗಿದೆ. ಪತ್ರ ಬರೆದು ಒತ್ತಡ ಹಾಕಲಾಗಿದೆ. ಎರಡು ರಾಜ್ಯದ ಮುಖ್ಯಮಂತ್ರಿಗಳಿಗೆ 14.02.25 ರಂದು ಪತ್ರ ಬರೆದಿದ್ದೇನೆ. ಸಂಬಂಧಪಟ್ಟ ಮಂತ್ರಿಗಳ ಜೊತೆಯಲ್ಲಿಯೂ ನಾನು ಮಾತನಾಡಿದ್ದೇನೆ” ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಅಣೆಕಟ್ಟೆ ಸುರಕ್ಷತೆ ಬಗ್ಗೆ ಸಮೀಕ್ಷೆ
“ಕಬಿನಿ ಅಣೆಕಟ್ಟೆಯಲ್ಲೂ ಒಂದಷ್ಟು ತಾಂತ್ರಿಕ ದೋಷಗಳಿವೆ ಎಂದು ಹೇಳಿದ ಕಾರಣಕ್ಕೆ ಇಡೀ ರಾಜ್ಯದ ಎಲ್ಲಾ ಅಣೆಕಟ್ಟುಗಳ ಸಮೀಕ್ಷೆ ನಡೆಸಿ ವರದಿ ತಯಾರಿಸಿ ಇಟ್ಟುಕೊಳ್ಳಲಾಗಿದೆ. ಒಂದು ಅಣೆಕಟ್ಟೆ ಗೇಟ್ ಗಳ ಆಯುಷ್ಯ 50 ವರ್ಷ ಎಂದು ಅನೇಕರು ಹೇಳುತ್ತಾರೆ. ಹೀಗಾಗಿ ಸುರಕ್ಷತೆ ಬಗ್ಗೆ ಗಮನ ಹರಿಸಿ ನಾವು ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.
“ಕಳೆದ ವರ್ಷ 19ನೇ ಗೇಟ್ ಕಳಚಿಬಿದ್ದು ತೊಂದರೆಯಾಗಿತ್ತು. ಆಗ ಬದಲಿ ಸ್ಟಾಪ್ ಗೇಟ್ ಅನ್ನು ವಾರದಲ್ಲಿ ಅಳವಡಿಸಿ ಅನಾಹುತ ತಪ್ಪಿಸಲಾಗಿತ್ತು. ಆಗ ವಿರೋಧ ಪಕ್ಷದವರು ಸೇರಿದಂತೆ ಅನೇಕರು ಟೀಕೆ ಮಾಡಿದರು. ನಾನು ಟೀಕೆಗಳನ್ನು ಸಂತೋಷದಿಂದ ಸ್ವೀಕಾರ ಮಾಡಿದೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆʼ ಎಂದು ಹೇಳಿದ್ದೆ. ಆಗ ಕನ್ನಯ್ಯ ನಾಯ್ಡು ಎಂಬುವವರನ್ನು ಕರೆಸಿ ಜಿಂದಾಲ್ ಸೇರಿದಂತೆ ಇತರರ ಸಹಯೋಗದಲ್ಲಿ ಗೇಟ್ ಅಳವಡಿಸಲಾಯಿತು. ನಂತರ ರೈತರಿಗೂ ನೀರು ನೀಡಲಾಯಿತು. ಇದನ್ನು ಎಲ್ಲರೂ ಅಭಿನಂದಿಸಿದರು” ಎಂದರು.
“ಈ ಘಟನೆ ನಡೆದ ದಿನ ರಾತ್ರಿ ಅಧಿಕಾರಿಗಳು ಕರೆ ಮಾಡಿ ಪರಿಸ್ಥಿತಿ ವಿವರಿಸಿದರು. ಆಗ ನಾನು ಬೆಳಿಗ್ಗೆ 9 ಗಂಟೆಗೆಲ್ಲಾ ಸ್ಥಳದಲ್ಲಿದ್ದು ಪರಿಸ್ಥಿತಿ ಅವಲೋಕಿಸಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಬಳಿಯೂ ಚರ್ಚೆ ಮಾಡಿದೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ನಮ್ಮ ರಾಜ್ಯಕ್ಕೆ ಮಾತ್ರವಿಲ್ಲ. ತುಂಗಭದ್ರಾ ಮಂಡಳಿಯ ಬಳಿ ಚರ್ಚೆ ಮಾಡಬೇಕಾಗುತ್ತದೆ. ಮೂರು ರಾಜ್ಯಗಳು ಸೇರಿ ತೀರ್ಮಾನ ಮಾಡಬೇಕಾಗುತ್ತದೆ” ಎಂದು ಹೇಳಿದರು.
“ಅಣೆಕಟ್ಟು ಸುರಕ್ಷತೆಯ ಬಗ್ಗೆ ಬಜಾಲ್ ಸಮಿತಿಯು ವರದಿ ನೀಡಿ ಕೂಡಲೇ ಎಲ್ಲಾ ಗೇಟ್ ಗಳನ್ನು ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದೆ. ಕ್ರಮ ತೆಗೆದುಕೊಳ್ಳಲು ತಡ ಮಾಡಬಾರದು ಎಂದು ಹೇಳಿದರು. ನಾವು ಸಹ ಎಲ್ಲಾ ಗೇಟ್ ಗಳನ್ನು ಬದಲಾವಣೆ ಮಾಡಲು ತೀರ್ಮಾನ ತೆಗೆದುಕೊಂಡೆವು. ಇದಕ್ಕೆ ಕನಿಷ್ಠ 8 ತಿಂಗಳು ಬೇಕಾಗುತ್ತದೆ” ಎಂದು ತಿಳಿಸಿದರು.
“1945 ರಲ್ಲಿ ಪ್ರಾರಂಭವಾದ ತುಂಗಭದ್ರಾ ಜಲಾಶಯ ಯೋಜನೆಯಿಂದ 1953 ರಲ್ಲಿ ಕಾಲುವೆಗೆ ನೀರು ಹರಿಸಲು ಪ್ರಾರಂಭ ಮಾಡಲಾಯಿತು. ನಮ್ಮ ರಾಜ್ಯದ ಪಾಲು 138.99 ಟಿಎಂಸಿ, ಆಂಧ್ರ ಮತ್ತು ತೆಲಂಗಾಣಕ್ಕೆ 73 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಸೇರಿ ಒಟ್ಟು 3.75 ಲಕ್ಷ ಹೆಕ್ಟೇರ್ ಸೇರಿದಂತೆ 9.26 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹಂಚಿಕೆ ಮಾಡಲಾಗುತ್ತಿದೆ” ಎಂದರು.