ಈಗ ಮಾವು ಸೀಸನ್ ಶುರುವಾಗಿದ್ದು, ಹಲಸು ಕೂಡ ಹಣ್ಣು ಮಾರುಕಟ್ಟೆಗೆ ಬರುತ್ತಿದೆ. ಹಲಸಿನ ಹಣ್ಣು ತಂದು ತಿಂದ ಮೇಲೆ ಮಿಕ್ಕಿದರೆ ಯೋಚನೆ ಬೇಡ, ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಹಲಸಿನ ಕಡುಬು ಮಾಡಿ. ಅದರಲ್ಲೂ ಕುಚ್ಚಲಕ್ಕಿ ಬಳಸಿದರೆ ರುಚಿ ಹೆಚ್ಚು, ಇದು ತುಂಬ ಸರಳವಾದ ರೆಸಿಪಿ ಆರೋಗ್ಯಕರ ಆಹಾರ.
ಬೇಕಾದ ಸಾಮಗ್ರಿ: ಹಲಸಿನ ಹಣ್ಣು, ಅಕ್ಕಿ, ಬೆಲ್ಲ, ತೆಂಗಿನಕಾಯಿ, ಕಾಳು ಮೆಣಸು ಏಲಕ್ಕಿ, ತುಪ್ಪ
ಮಾಡುವುದು ಹೇಗೆ: ಬೀಜ ತೆಗೆದು ಹಲಸಿನ ಹಣ್ಣಿನ ತೊಳೆಗಳನ್ನು ಬಿಡಿಸಿ ತೆಗೆದಿಟ್ಟು ಕೊಳ್ಳಿ, ಒಂದು ಲೋಟ ಕುಚ್ಚಲಕ್ಕಿ ಅಥವಾ ಬೆಳ್ತಿಗೆ ಅಕ್ಕಿಯನ್ನು ತೊಳೆದು ೭-೮ ಗಂಟೆ ನೆನೆಸಿಡಿ. ನೆನೆಸಿಟ್ಟ ಅಕ್ಕಿಯನ್ನು ಎರಡು ಸುತ್ತು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ, ನಂತರ ಅಂದಾಜು ಎರಡು ಲೋಟದಷ್ಟು ಪ್ರಮಾಣದಲ್ಲಿ ಬಿಡಿಸಿಟ್ಟ ಹಲಸಿನ ತೊಳೆಗಳನ್ನು ಮತ್ತು ನಿಮ್ಮ ಟೇಸ್ಟ್‌ಗೆ ಸರಿಹೊಂದುವಂತೆ ಮತ್ತು ಹಲಸಿನ ತೊಳೆಗಳ ಸಿಹಿ ಎಷ್ಟಿದೆ ಎಂಬುದನ್ನು ಆಧರಿಸಿ ಬೆಲ್ಲವನ್ನು ಮಿಕ್ಸಿಗೆ ಹಾಕಿಕೊಳ್ಳಿ, ಸ್ವಲ್ಪ ತುರಿದ ತೆಂಗಿನ ಕಾಯಿ ಸೇರಿಸಿ ಮೂರು ಸುತ್ತು ತಿರುಗಿಸಿ. ಹಿಟ್ಟು ತುಂಬಾ ನುಣ್ಣಗೆ ಆಗಬೇಕಿಲ್ಲ, ಮೀಡಿಯಂ ಆದರೆ ಸಾಕು. ನಂತರ ಇಡ್ಲಿ ಪಾತ್ರೆಗೆ ನೀರು ಹಾಕಿ ಬಾಳೆ ಎಲೆಯನ್ನು ಅದರಲ್ಲಿಟ್ಟುಕೊಳ್ಳಿ. ಬಾಳೆ ಎಲೆಗೆ ತುಪ್ಪ ಸವರಿಕೊಳ್ಳಿ.
ರುಬ್ಬಿದ ಹಿಟ್ಟಿಗೆ ನಾಲ್ಕೈದು ಕಾಳುಮೆಣಸು, ಸ್ವಲ್ಪ ತೆಂಗಿನ ಕಾಯಿ ಚೂರು ಮತ್ತು ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಿ ಆ ಹಿಟ್ಟನ್ನು ಬಾಳೆ ಎಲೆಗೆ ಹಾಕಿ ಬೇಯಲು ಬಿಡಿ. ಸಾಮಾನ್ಯ ಇಡ್ಲಿ ಪಾತ್ರೆಯಾದರೆ ೪೫ ನಿಮಿಷ ಬೇಯಲು ಬಿಡಿ. ಮತ್ತೊಂದು ವಿಧಾನ ವೆಂದರೆ ಬಾಳೆ ಎಲೆಗಳನ್ನು ತುಂಡುಗಳನ್ನಾಗಿ ತುಪ್ಪ ಸವರಿ ಮುಷ್ಟಿಯಷ್ಟು ಹಿಟ್ಟನ್ನು ಆ ಎಲೆಗಳಿಗೆ ಸವರಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಬೇಯಲು ಇಡಬಹುದು. ಒಂದು ವೇಳೆ ನಿಮಗೆ ತೇಗ ಮರದ ಸ್ವಚ್ಛ ಎಲೆಗಳು ಸಿಕ್ಕಿದರೆ ಆ ಎಲೆಯಲ್ಲಿ ಹಿಟ್ಟು ಸವರಿ ಮಡಚಿ ಇರಿಸಿ ಬೇಯಿಸಬಹುದು. ಇದನ್ನು ಯಾವುದೇ ಚಟ್ನಿ, ಪಲ್ಯ , ಸಾಂಬಾರ್ ಇಲ್ಲದೆ ತಿನ್ನಬಹುದು, ಬೇಕಿದ್ದವರು ಚಟ್ನಿ ಜೊತೆಗೂ ಆಸ್ವಾದಿಸಬಹುದು.