ವಾಷಿಂಗ್ಟನ್: ಭಾರತ ಮತ್ತು ಇತರ ರಾಷ್ಟ್ರಗಳು ಅಮೆರಿಕದಿಂದ ರಫ್ತು ಆಗುವ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕದ ಪ್ರಮಾಣ “ಅತ್ಯಂತ ಅನ್ಯಾಯ” ಆಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಸುಂಕ ಹೇರಿಕೆ ಜಾರಿ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ಬುಧವಾರ ನಡೆದ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು ನಮ್ಮ ದೇಶದ ಮೇಲೆ ಯಾವ ದೇಶ ಎಷ್ಟು ಸುಂಕ ವಿಧಿಸುತ್ತಿದೆಯೋ ಅಷ್ಟೇ ಪ್ರಮಾಣದ ಸುಂಕವನ್ನು ಆ ದೇಶದ ಮೇಲೆ ಹೇರಲಾಗುವುದು. ಈ ನಿಯಮ ಏಪ್ರಿಲ್ ೨ರಿಂದ ಜಾರಿಗೆ ಬರಲಿದೆ ಎಂದರು.
ವಿದೇಶಗಳಿಂದ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಆಯಾ ದೇಶಗಳು ಅಮೆರಿಕದ ರಫ್ತಿನ ಮೇಲೆ ವಿಧಿಸುವಷ್ಟೇ ಅಂದರೆ ಪ್ರತಿ ಸುಂಕ ದರ ಜಾರಿಗೊಳಿಸುವುದಾಗಿ ಅವರು ಹೇಳಿದರು.
ಇತರ ದೇಶಗಳು ದಶಕಗಳಿಂದ ನಮ್ಮ ವಿರುದ್ಧ ಭಾರೀ ಪ್ರಮಾಣದಲ್ಲಿ ಸುಂಕ ಹೇರಿವೆ. ಯುರೋಪಿಯನ್ ಒಕ್ಕೂಟ, ಚೀನಾ, ಬ್ರೆಜಿಲ್, ಭಾರತ-ಮೆಕ್ಸಿಕೊ ಮತ್ತು ಕೆನಡಾ – ನೀವು ಅವುಗಳ ಬಗ್ಗೆ ಕೇಳಿದ್ದೀರಾ? – ಮತ್ತು ಲೆಕ್ಕವಿಲ್ಲದಷ್ಟು ಇತರ ರಾಷ್ಟ್ರಗಳು ನಾವು ವಿಧಿಸುವುದಕ್ಕಿಂತ ಹೆಚ್ಚಿನ ಸುಂಕಗಳನ್ನು ನಮಗೆ ವಿಧಿಸುತ್ತವೆ. ಇದು ತುಂಬಾ ಅನ್ಯಾಯ ಎಂದು ಅವರು ಕಿಡಿಕಾರಿದರು.
ಉದಾಹರಣೆಗೆ ಭಾರತ ನಮ್ಮ ಮೇಲೆ ಶೇಕಡಾ 100ಕ್ಕಿಂತ ಹೆಚ್ಚು ಸುಂಕ ವಿಧಿಸುತ್ತಿದೆ ಎಂದು ಅವರು ಹೇಳಿದರು. ಈ ಮೂಲಕ ಭಾರತದ ಮೇಲೂ ಪ್ರತಿ ಸುಂಕ ಏರಿಸುವ ಸುಳಿವನ್ನು ಟ್ರಂಪ್ ನೀಡಿದರು.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿ ಸುಂಕ ಹೇರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಮೋದಿ ಅಮೆರಿಕ ಪ್ರವಾಸ ಮುಗಿಸಿ ಮರಳಿದ ನಂತರ ಸುಂಕ ಹೇರಿಕೆ, ವಲಸೆ ಸೇರಿದಂತೆ ಹಲವು ವಿಷಯಗಳ ಕುರಿತ ಕಠಿಣ ನಿರ್ಧಾರ ಮುಂದುವರಿಯಲಿದ್ದು, ಈ ಬಗ್ಗೆ ವಾದ ಮಂಡಿಸಲು ನನ್ನ ಬಳಿ ಸಾಧ್ಯವೇ ಎಂದು ಟ್ರಂಪ್ ಪ್ರಶ್ನಿಸಿದ್ದರು.