ಮೈ ಬೆಸ್ಟ್ ಫ್ರೆಂಡ್ ಎಂದು ವಿದೇಶಿ ಮಾಧ್ಯಮಗಳ ಮುಂದೆ ಪ್ರತಿ ಸಾರಿಯೂ ಭಾರತದ ಪ್ರಧಾನಿಯನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುವ ಡೊನಾಲ್ಡ್ ಟ್ರಂಪ್, ಒಳಗೊಳಗೆ ಭಾರತಕ್ಕೆ ಚೂರಿ ಹಾಕತ್ತಿರುವುದು ಕಟುಸತ್ಯ! ಜಾಗತಿಕ ಮಟ್ಟದಲ್ಲಿ ಭಾರತದ ನೈಜ ಮತ್ತು ಸದೃಢ ಬೆಳವಣಿಗೆಗೆ ಇಂದು ದೊಡ್ಡ ಸವಾಲಾಗಿರುವುದೇ ಟ್ರಂಪ್ ಇಬ್ಬಗೆಯ ವಿದೇಶಾಂಗ ನೀತಿ.
ಅಮೆರಿಕ ಸಾಮ್ರಾಜ್ಯಶಾಹಿ ಧೋರಣೆ ಇಂದಿನದಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ತಮ್ಮ ದೇಶದ ವಸಾಹತುಗಳನ್ನು ಒಂದೊಂದಾಗಿ ವಿಸ್ತರಿಸಿಕೊಳ್ಳುವ ಪರಮಾಕಾಂಕ್ಷಿ ಪ್ರವೃತ್ತಿ ಮತ್ತು ನೆಲ, ಜಲ ಮತ್ತು ವಾಯುನೆಲೆಗಳ ಮೇಲೆ ತನ್ನ ಅಧಿಪತ್ಯ ಸಾಧಿಸಬೇಕೆಂಬ ಉತ್ಕಟೇಚ್ಛೆ ಈ ದೇಶದ್ದು. ಬ್ರಿಟಿಷರಿಂದ ಬಳುವಳಿ ಪಡೆದ ಈ ಮನೋಧೋರಣೆಯನ್ನು ಅಮೆರಿಕ ಅಷ್ಟು ಸುಲಭವಾಗಿ ತ್ಯಜಿಸುವುದೆಂದರೆ ಅದನ್ನು ಪ್ರಪಂಚದ ಇತರೆ ದೇಶಗಳು ನಂಬಲಾಗದು. ಕೆರಿಬಿಯನ್ ದ್ವೀಪಗಳು ಮತ್ತು ಲ್ಯಾಟಿನ್ ಅಮೆರಿಕದ ಮೇಲೆ ತನಗೆ ಎಲ್ಲಿಲ್ಲದ ಸ್ಥಾಪಿತ ಹಕ್ಕುಗಳಿವೆ ಎಂದು ಬೀಗುವ ಅಮೆರಿಕ, ಇವುಗಳ ಪ್ರಜಾತಂತ್ರವನ್ನು ಉಳಿಸುವ ಮತ್ತು ಇವುಗಳ ಸುಗಮ ಪ್ರಜಾತಾಂತ್ರಿಕ ಆಡಳಿತಕ್ಕೆ ನೆರವಾಗುವ ರೀತಿಯಲ್ಲಿ ತನ್ನ ಆಡಳಿತವನ್ನು ನಡೆಸುತ್ತಿಲ್ಲ. ಕೊಡು-ಕೊಳ್ಳುವ ವಿಚಾರದಲ್ಲಿ ದೊಡ್ಡಣ್ಣನ ಕೊಳ್ಳುಬಾಕ ಧೋರಣೆಯೇ ಅಧಿಕವಾಗಿ ಕಾಣಿಸುತ್ತಿದೆ! ನ್ಯಾಯ ಮತ್ತು ಸಮಾನತೆ ಎಂಬ ಮೂಲಭೂತ ನ್ಯಾಯ ಸಿದ್ಧಾಂತವನ್ನು ಅಮೆರಿಕ ಗಾಳಿಗೆ ತೂರಿ, ತನ್ನದೇ ಆದ ವಿದೇಶಿ ನೀತಿಯನ್ನು ಪಾಲಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಲ್ಲ.
ಸಣ್ಣ ದೇಶವಿರಲಿ, ದೊಡ್ಡದಿರಲಿ. ಇಂತಹ ದೇಶಗಳ ಆಂತರಿಕ ವಿಚಾರದಲ್ಲಿ ದೊಡ್ಡ ದೇಶವಾದ ಅಮೆರಿಕ ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದು ಜನರಲ್ ಇಂಟರ್ ನ್ಯಾಷನಲ್ ಪ್ರಿನ್ಸಿಪಲ್ ಆಫ್ ಲಾ. ನಿಕರಾಗುವ ದ್ವೀಪದ ಸಾರ್ವಭೌಮತೆಗೆ ಧಕ್ಕೆಯಾಗುವ ರೀತಿಯಲ್ಲಿ ಬಂಡುಕೋರರಿಗೆ ಆಯುಧಗಳನ್ನು ನೀಡಿ ಅಲ್ಲಿದ್ದ ಸರ್ಕಾರದ ವಿರುದ್ಧವೇ ಬಂಡೇಳಲು ಅಮೆರಿಕ ಪ್ರಚೋದಿಸಿದ್ದನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಒಪ್ಪಿಕೊಂಡಿಲ್ಲ. ಇಂತಹ ಘಟನೆ ಸಂಭವಿಸಿ ಕೆಲವು ದಶಕಗಳೇ ಆಗಿದ್ದರೂ ಅಮೆರಿಕಕ್ಕೆ ಪಿಸಿಐಜೆ ಅಥವಾ ಐಸಿಜೆ ನೀಡಿರುವ ಐತಿಹಾಸಿಕ ತೀರ್ಪುಗಳ ಬಗ್ಗೆ ಕನಿಷ್ಟ ಗೌರವವೂ ಇದ್ದಂತ್ತಿಲ್ಲ ! ದೇಶವೊಂದರ ಆಂತರಿಕ ಪ್ರಜಾತಂತ್ರದ ವಿಚಾರದಲ್ಲಿ ಯಾವುದೇ ಇನ್ನೊಂದು ದೇಶದ ಹಸ್ತಕ್ಷೇಪ ಸಲ್ಲದು ಎಂಬ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪುಗಳನ್ನೇ ಧಿಕ್ಕರಿಸುವ ಟ್ರಂಪ್ ಧೋರಣೆಯನ್ನು ಈಗ ನಾವೇನೆಂದು ಕರೆಯೋಣ? ಮೂರು ದಿನಗಳ ಹಿಂದೆ ಟ್ರಂಪ್, ಅಂತಾರಾಷ್ಟ್ರೀಯ ಕಾಯಿದೆಗಳ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಇಲ್ಲಿ ಗಮನಿಸಬೇಕಿದೆ. ತಮಗೆ ಅಂತಾರಾಷ್ಟ್ರೀಯ ಕಾನೂನುಗಳ ಬಗ್ಗೆ ನಂಬಿಕೆ ಇಲ್ಲ ಎಂದು ಅಮೆರಿಕದ ಅಧ್ಯಕ್ಷರಾದವರು ಹೇಳುವರೆಂದರೆ ಇದಕ್ಕೆ ಯಾವ ರೀತಿಯಾದ ಖಡಕ್ ಪ್ರತಿಕ್ರಿಯೆ ಸಾಧ್ಯ? ಭದ್ರತಾ ಮಂಡಳಿಯಲ್ಲಿ ವಿಟೋ ಪವರ್ ಹೊಂದಿರುವ ಅಮೆರಿಕ ತಾನು ಮಾಡಿದ್ದೆಲ್ಲವೂ ಸರಿ ಎಂದೇ ಭಾವಿಸಿದೆ, ಯಾವಾಗಲೂ ತಾನೇ ಸರಿ ಎನ್ನುವ ಹಾಗೆ ಮಾತನಾಡುತ್ತದೆ! ಇದನ್ನು ವಿರೋಧಿಸುವ ದೇಶಗಳಿಗೆ ಎಡ ಪಂಥೀಯ ಪಟ್ಟವನ್ನು ನೀಡಿ ಬಾಯಿ ಮುಚ್ಚಿಸುತ್ತದೆ.
ಅಮೆರಿಕದ ವಿಟೋ ಪವರ್ ಬಗ್ಗೆ ಸವಾಲೆಸೆದು ಅಧಿಕಾರವಿರುವ ಬ್ರಿಟನ್, ರಷ್ಯಾ, ಚೀನಾ ಕೂಡಾ ಹೆಚ್ಚೂ ಕಡಿಮೆ ದೊಡ್ಡಣ್ಣನ ಆರ್ಭಟವನ್ನು ಸಹಿಸಿಕೊಳ್ಳಲು ಆ ದೇಶಗಳ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶಗಳೂ ಕಾರಣ. ವಿಶ್ವಸಂಸ್ಥೆಯಲ್ಲಿ ಸೂಪರ್ ಪವರ್ ದೇಶಗಳಾಗಿರುವ ಬ್ರಿಟನ್, ಚೀನಾ ಮತ್ತು ರಷ್ಯಾ ದೇಶಗಳಿಂದು ವಿವಿಧ ಹಂತಗಳಲ್ಲಿ ವಿವಿಧ ಬಗೆಯ ಸಮಸ್ಯೆಗಳ ಮಹಾಸುಳಿಗೆ ಸಿಲುಕಿವೆ. ರಷ್ಯಾದಲ್ಲಿ ರಾಜಕೀಯ ಸನ್ನಿವೇಶಗಳು ಎಲ್ಲವೂ ಸರಿಯಿಲ್ಲ. ಈ ದೇಶದ ಆಂತರಿಕ ಆಡಳಿತ ಮತ್ತು ಭದ್ರತೆ ವಿಚಾರದಲ್ಲಿ ಇಂದು ರಷ್ಯಾ ಉಕ್ರೇನ್ ಎಸೆದಿರುವ ಮಿಲಿಟರಿ ಸವಾಲುಗಳನ್ನು ದಿಟ್ಟವಾಗಿ ಎದುರಿಸುವುದೇ ಗಂಭೀರ ಸಂಗತಿ. ಈ ದಿಶೆಯಲ್ಲಿ ರಷ್ಯಾಗೆ ಉಕ್ರೇನ್ ಜೊತೆಗಿನ ಸುದೀರ್ಘ ಮಿಲಿಟರಿ ಕಾರ್ಯಾಚರಣೆಯ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಸಾಕೆಂಬ ಪರಿಸ್ಥಿತಿ ಇದೆ. ಹೀಗಿರುವಾಗ ರಷ್ಯಾ ಅಧ್ಯಕ್ಷರಿಗೆ ವೆನೆಜುವೆಲಾ ಅಂತಹ ಪುಟ್ಟ ದೇಶದ ಸಮಸ್ಯೆ ಬಗೆಹರಿಸಲು ರಾಯಭಾರ ವಹಿಸಲು ವ್ಯವಧಾನವೆಲ್ಲಿದೆ? ಇನ್ನು ಬ್ರಿಟನ್. ಈ ದೇಶವು ಅಮೆರಿಕ ಹೇಳಿದ್ದೆಲ್ಲವನ್ನು ಎಸ್ ಸರ್ ಎಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿದೆ! ಕಾರಣ ಎಂದರೆ ಬ್ರಿಟನ್ ದೇಶದಲ್ಲಿಯೂ ರಾಜಕೀಯ ಸನ್ನಿವೇಶಗಳು ಸರಿಯಿಲ್ಲ. ಮಿಗಿಲಾಗಿ ಬ್ರಿಟನ್ ದೇಶವು ಅಮೆರಿಕದ ಜೊತೆ ಹೊಂದಿರುವ ವಾಣಿಜ್ಯ, ವ್ಯಾಪಾರ ಮತ್ತು ಇತರೆ ಒಪ್ಪಂದಗಳಿಗೆ ಭವಿಷ್ಯದಲ್ಲಿ ತೊಂದರೆಯಾಗಬಾರದಲ್ಲವೇ? ಹೀಗಾಗಿ ಅಮೆರಿಕ ಹೇಳುವುದೆಲ್ಲವನ್ನೂ ಈಗ ಬ್ರಿಟನ್ ವಿಧಿಯಿಲ್ಲದೆ ಒಪ್ಪಿ ಸುಮ್ಮನಾಗಿಬಿಡುವಂತಹ ಅಸಹಾಯಕತೆ! ಈಗ ಚೀನಾ ಸರದಿ.
ಐದು ವರ್ಷಗಳ ಹಿಂದೆ ಕೋವಿಡ್ ಮಹಾಮಾರಿ ಸಂಕ್ರಮಿಸಿದ ಬಳಿಕ ವಾಣಿಜ್ಯ, ವ್ಯಾಪಾರ ಮತ್ತು ಬಹುತೇಕ ರಂಗಗಳಲ್ಲಿ ಡ್ರಾಗನ್ ದೇಶದ ಪ್ರಗತಿ ಗಣನೀಯ ಪ್ರಮಾಣದಲ್ಲಿ ಕುಂಠಿತಗೊಂಡಿದೆ. ಇದು ಹೀನಾಯಮಾಯ ಸ್ಥಿತಿಯನ್ನೂ ತಲುಪಿದೆ ಎಂದರೆ ಅತಿಶಯವಲ್ಲ. ಆದರೂ ತನ್ನ ಈ ಎಲ್ಲ ದೌರ್ಬಲ್ಯಗಳನ್ನು ಚೀನಾ ಅತಿ ಜಾಣತನದಿಂದ ಮುಚ್ಚಿಕೊಂಡು ಅಮೆರಿಕ ಜೊತೆ ಸೈದ್ಧಾಂತಿಕ ಭಿನ್ನತೆ ಇದ್ದರೂ ಜಾಗತಿಕ ಮಟ್ಟದಲ್ಲಿ ತನ್ನ ಉಳಿವಿಗಾಗಿ ದೊಡ್ಡಣ್ಣನ ಜೊತೆ ಕೈ ಜೋಡಿಸಿದೆ. ವೈದ್ಯ, ಬಾಹ್ಯಾಕಾಶ, ಸಾಫ್ಟ್‌ವೇರ್ ಮತ್ತು ತಾಂತ್ರಿಕ ವಿಜ್ಞಾನದ ಜಗತ್ತಿನಲ್ಲಿ ಅಮೆರಿಕ, ರಷ್ಯಾಗಿಂತಲೂ ತಾನೇ ಸೂಪರ್ ಕಿಂಗ್ ಎಂದು ಮೆರೆಯುತ್ತಿದ್ದ ಚೀನಾ ಕಳೆದ ಐದು ವರ್ಷಗಳಿಂದಲೂ ಮೆತ್ತಗೆ ಆಗಿದೆ! ಚೀನಾ ತನ್ನ ದೌರ್ಬಲ್ಯವನ್ನು ಹೊರಗಿನ ಪ್ರಪಂಚಕ್ಕೆ ತೋರಿಸಿಕೊಳ್ಳುತ್ತಿಲ್ಲ. ಆದರೆ ತನ್ನ ದೇಶದಲ್ಲಿ ತಲೆದೋರಿರುವ ಹಲವು ಹತ್ತು ಡೊಮಸ್ಟಿಕ್ ಸಮಸ್ಯೆಗಳಿಗೆ ಮತ್ತು ಇಂದಿನ ಹಲವು ಹತ್ತು ಬಿಸಿನೆಸ್ ವಿಚಾರಗಳಿಗೆ ಅಮೆರಿಕದ ಜೊತೆ ಸಂಬಂಧಗಳನ್ನು ಚೀನಾ ಹಾಳು ಮಾಡಿಕೊಳ್ಳುವಂತಿಲ್ಲ.
ಬಹಳ ಮುಖ್ಯವಾಗಿ ಮೂರು ವರ್ಷಗಳ ಹಿಂದೆ ಭಾರತ ಚೀನಾ ಗಡಿಯ ಗ್ಯಾಲ್ವಾನ್ ಪ್ರದೇಶದಲ್ಲಿ ಭಾರತದ ಯೋಧರ ನರಮೇಧ ಸಂಭವಿಸುವರೆಗೂ ಭಾರತದ ಜೊತೆ ಚೀನಾ ಸಂಬಂಧಗಳು ಉತ್ತಮವಾಗಿಯೇ ಇದ್ದವು. ಯಾವಾಗ ಚೀನಾ, ಭಾರತದ ಮಾರುಕಟ್ಟೆಯಲ್ಲಿ ತನ್ನ ಎಲ್ಲ ವಸ್ತುಗಳನ್ನು ತಂದು ಸುರಿಯಲು ಆರಂಭಿಸಿತೋ ಆಗ ಭಾರತ ಹೇರಿದ ಕಠಿಣ ನಿರ್ಬಂಧಗಳಿಂದ ಇಂದು ಚೀನಾ ಅಮೆರಿಕದ ತೆಕ್ಕೆಯಲ್ಲಿ ಉಸಿರಾಡುವಂತಾಗಿದೆ! ಒಟ್ಟಿನಲ್ಲಿ ವಸ್ತುಸ್ಥಿತಿ ಹೀಗಿರಬೇಕಾದರೆ ಚೀನಾ, ರಷ್ಯಾ ಅಥವಾ ಬ್ರಿಟನ್ ಯಾವ ಆತ್ಮ ವಿಶ್ವಾಸದ ಮೇಲೆ ಅಮೆರಿಕದ ವಿರುದ್ಧ ವಿಟೋ ಧ್ವನಿ ಎತ್ತಲು ಸಾಧ್ಯ? ಅಮೆರಿಕ ವಿರುದ್ಧ ಭದ್ರತಾ ಮಂಡಳಿಯಲ್ಲಿ ವಿಟೋ ಚಲಾಯಿಸಲು ಸಾಧ್ಯ? ಭದ್ರತಾ ಮಂಡಳಿಯಲ್ಲಿ ಯಾರಿಂದು ಅಮೆರಿಕದ ಸರ್ವಾಧಿಕಾರಿ ಧೋರಣೆಗಳ್ನು ಬಲವಾಗಿ ಖಂಡಿಸಿ ಗೊತ್ತುವಳಿಯನ್ನು ಮಂಡಿಸಬೇಕಿದೆಯೋ ಇಂತಹ ಚೀನಾ, ಬ್ರಿಟನ್ ಮತ್ತು ರಷ್ಯಾ ದೇಶಗಳೇ ಅತಿ ದುರ್ಬಲವಾಗಿವೆ.
ವಿಶ್ವ ಸಂಸ್ಥೆಯ ಎಲ್ಲ ವೇದಿಕೆಗಳಲ್ಲಿ ತನಗೆ ಸರಿಸಮಾನವಾಗಿ ಚಲಾವಣೆ ಆಗಬೇಕಿರುವ ಈ ದೇಶಗಳ ದೌರ್ಬಲ್ಯಗಳೇ ಇಂದು ಟ್ರಂಪ್ ಸರ್ವಾಧಿಕಾರಿ ಧೋರಣೆ ಮತ್ತು ಧಿಮಾಕಿಗೆ ಮೂಲ ಕಾರಣವಾಗಿದೆ. ತನ್ನ ಮಾತು ಮತ್ತು ಆದೇಶಗಳನ್ನು ಪಾಲಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಿಮಗೂ ಶಿಕ್ಷೆ ತಪ್ಪಿದ್ದಲ್ಲ ಎಂದು ಅಮೆರಿಕ ಹೆದರಿಸುವ ಪ್ರವೃತ್ತಿ ! ದೊಡ್ಡಣ್ಣನ ದರಬಾರು ಅಥವಾ ಕಾರುಬಾರು ಎಂದರೆ ಇದೇ ! ವೆನೆಜುವೆಲಾ ದೇಶವು ಮಾದಕವಸ್ತುಗಳ ಸಾಗಣೆ ಮತ್ತು ನಿಯಂತ್ರಣ ವಿಚಾರದಲ್ಲಿ ತನ್ನ ಮಾತುಗಳನ್ನು ಕೇಳಲಿಲ್ಲ ಎಂಬ ಕಾರಣಕ್ಕೆ ಈ ದೇಶದ ಅಧ್ಯಕ್ಷರನ್ನು ಇವರ ಪ್ರಯಾಣದ ದಾರಿ ಮಧ್ಯೆಯೇ ಬಂಧಿಸಿ ಅಮೆರಿಕ ತನ್ನ ವಶಕ್ಕೆ ತೆಗೆದುಕೊಂಡಿದ್ದು ಗಮನಾರ್ಹ. ಅಲ್ಲದೆ ಅಮೆರಿಕದ ಈ ಪ್ರವೃತ್ತಿಯನ್ನು ಖಂಡಿಸಿದ ಕೊಲಂಬಿಯಾ, ಚೀನಾ, ಬ್ರೆಜಿಲ್ ಮತ್ತು ಇರಾನ್ ದೇಶಗಳಿಗೆ ಅಮೆರಿಕಾ ಈಗ ಕ್ಯಾರೇ ಎನ್ನುತ್ತಿಲ್ಲ! ಈಗ ಮುಂದಿನ ಸರದಿ ನಿಮ್ಮದು ಎಂಬರ್ಥದಲ್ಲಿ ಡೋನಾಲ್ಡ್ ಟ್ರಂಪ್ ಕೊಲಂಬಿಯಾ ದೇಶದ ರಾಷ್ಟ್ರಾಧ್ಯಕ್ಷರಿಗೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುತ್ತಿರುವುದು ಕಳವಳಕಾರಿ.
ಮೈ ಬೆಸ್ಟ್ ಫ್ರೆಂಡ್ ಎಂದು ವಿದೇಶಿ ಮಾಧ್ಯಮಗಳ ಮುಂದೆ ಭಾರತದ ಪ್ರಧಾನಿಯನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುವ ಡೊನಾಲ್ಡ್ ಟ್ರಂಪ್, ಒಳಗೊಳಗೆ ಭಾರತಕ್ಕೆ ಚೂರಿ ಹಾಕತ್ತಿರುವುದು ಕಟುಸತ್ಯ ! ಜಾಗತಿಕ ಮಟ್ಟದಲ್ಲಿ ಭಾರತದ ನೈಜ ಮತ್ತು ಸದೃಢ ಬೆಳವಣಿಗೆಗೆ ಇಂದು ದೊಡ್ಡ ಸವಾಲಾಗಿರುವುದೇ ಟ್ರಂಪ್ ವಿದೇಶಾಂಗ ನೀತಿ! ಅಮೆರಿಕ ಮತ್ತು ಭಾರತದ ನಡುವಣ ಎಲ್ಲ ರೀತಿಯ ಒಪ್ಪಂದಗಳು ಮತ್ತು ಒಡಂಬಡಿಕೆಗಳು ಭವಿಷ್ಯದಲ್ಲಿ ಮುರಿದುಬೀಳಬೇಕೆಂಬ ದುರುzಶದಿಂದಲೇ ಟ್ರಂಪ್ ಈಗ ಭಾರತದ ಪ್ರಧಾನಿ ಅವರನ್ನು ವ್ಯವಹಾರಿಕವಾಗಿ ಟಾರ್ಗೆಟ್ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಇದು ಮೋದಿಯೊಂದಿಗೆ ಡೊನಾಲ್ಡ್ ಆಡುತ್ತಿರುವ ಮೈಂಡ್ ಗೇಮ್.. ! ಒಂದು ಕಡೆ ಭಾರತೀಯ ಉತ್ಪನ್ನಗಳ ಮೇಲೆ ವಿಪರೀತ ಸುಂಕವನ್ನು ಹೇರಿ ಒಂದರ್ಥದಲ್ಲಿ ಸುಂಕ ಉಗ್ರವಾದವನ್ನು ( ಕಸ್ಟಮ್ಸ್ ಟೆರರಿಸಂ!) ಪ್ರದರ್ಶಿಸುವುದು. ಮತ್ತೊಂದು ಕಡೆ ರಷ್ಯಾ ಜೊತೆಗಿನ ತೈಲದ ಒಪ್ಪಂದಗಳು ಮುರಿದುಬೀಳುವ ಹಾಗೆ ಭಾರತದ ಮೇಲೆ ಪರೋಕ್ಷ ಒತ್ತಡವನ್ನು ತರುವುದು. ಇಲ್ಲವಾದರೆ ಅಮೆರಿಕ ಈ ಸಂದರ್ಭದಲ್ಲಿ ಯಾಕೆ ಭಾರತವು ವೆನೆಜುವೆಲಾ ದೇಶದಿಂದ ತೈಲ ಖರೀದಿಸುತ್ತದೆ ಎಂಬುದನ್ನು ಹೇಳಬೇಕು. ಟ್ರಂಪ್ ಮಿತ್ರಭೇದ ನೀತಿ ಏನೆಂಬುದು ಈಗ ಭಾರತದ ಪ್ರಧಾನಿಗೂ ಗೊತ್ತಾಗಿದೆ.


