ಇರಾನ್ ವಿರುದ್ಧ ದಾಳಿ ಮುಂದುವರಿಸುತ್ತಲೇ ಇರುವ ಅಮೆರಿಕವು ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿದ್ದು, ಮುಂದಿನ ದಿನಗಳಲ್ಲಿ ಕ್ಯೂಬಾ ದೇಶದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ ಎಂದು ಹೇಳುವ ಮೂಲಕ ಆ ರಾಷ್ಟ್ರದ ಮೇಲೆ ಕೆಂಗಣ್ಣು ಬೀರಿದ್ದಾರೆ ಎನ್ನಲಾಗಿದೆ.
ಜಾಗತಿಕ ರಾಜಕೀಯದ ಯಜಮಾನಿಕೆ ಅಮೆರಿಕದ್ದೇ ಎಂದು ಮತ್ತೆ ಸಾಬೀತುಪಡಿಸುವ ಪ್ರಯತ್ನದಲ್ಲಿರುವ ಟ್ರಂಪ್ , ವೆನೆಜುವೆಲಾದಲ್ಲಿ ಹೊಸ ಸರ್ಕಾರವನ್ನು ಅಧಿಕೃತವಾಗಿ ಅಮೆರಿಕ ಗುರುತಿಸಿದೆ. ಅಲ್ಲಿನ ಚಿನ್ನ ಮತ್ತು ಖನಿಜಗಳ ಮಾರಾಟಕ್ಕೆ ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಹಾಕಿದೆ. ಕ್ಯೂಬಾದ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್, ‘ಕ್ಯೂಬಾದಲ್ಲಿ ಶೀಘ್ರದಲ್ಲೇ ದೊಡ್ಡ ಬದಲಾವಣೆಗಳು ಬರಲಿವೆ. ಅವರು ನಮ್ಮೊಂದಿಗೆ, ಅದರಲ್ಲೂ ವಿಶೇಷವಾಗಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತುಕತೆ ನಡೆಸಲು ಬಯಸುತ್ತಿದ್ದಾರೆ. ಕ್ಯೂಬಾದೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ನಮಗೆ ಸುಲಭ,ಸದ್ಯಕ್ಕೆ ನಮ್ಮ ಪೂರ್ಣ ಗಮನ ಇರಾನ್ ಮೇಲೆ ಇದೆ ಎಂದು ಟ್ರಂಪ್ ಹೇಳಿದ್ದಾರೆ.
ದುಬಾರಿ ಕ್ಷಿಪಣಿಗಳಿಗಿಂತ ಭಾರಿ ಸ್ಫೋಟಕ ಹಾರಿಸಬಲ್ಲ ದೊಡ್ಡ ಯುದ್ಧನೌಕೆಗಳ ಅಗತ್ಯವಿದೆ. ನಾವು ಹಿಂದಿನ ಹಡಗುಗಳಿಗಿಂತ 100 ಪಟ್ಟು ಹೆಚ್ಚು ಶಕ್ತಿಶಾಲಿಯಾದ 10 ಹೊಸ ಯುದ್ಧನೌಕೆಗಳನ್ನು ನಿರ್ಮಿಸುತ್ತಿದ್ದೇವೆ. ಇವುಗಳ ಭಯಕ್ಕೆ ಯಾರೂ ಅಮೆರಿಕವನ್ನು ಎದುರಿಸಲು ಧೈರ್ಯ ಮಾಡಬಾರದು. ಈ ಶಕ್ತಿಯನ್ನು ಬಳಸುವ ಪರಿಸ್ಥಿತಿ ಬರಬಾರದು ಎಂಬುದು ನನ್ನ ಆಶಯ ಎಂದು ಜಾಗತಿಕವಾಗಿ ಎಚ್ಚರಿಕೆ ನೀಡಿದ್ದಾರೆ.
ಮೂರು ದಿನಗಳಲ್ಲಿ ಇರಾನ್‌ನ 42 ನೌಕಾ ಹಡಗುಗಳನ್ನು ನಾವು ನಾಶಪಡಿಸಿದ್ದೇವೆ. ಅವರ ವಾಯುಪಡೆ ಮತ್ತು ದೂರಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣ ಧ್ವಂಸಗೊಳಿಸಿದ್ದೇವೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಗೆ ಅತ್ಯಂತ ಹತ್ತಿರವಿತ್ತು. ನಮ್ಮ ‘ಮಿಡ್‌ನೈಟ್ ಹ್ಯಾಮರ್’ ಕಾರ್ಯಾಚರಣೆ ಅವರ ಪರಮಾಣು ಕನಸನ್ನು ಭಗ್ನಗೊಳಿಸಿದೆ ಎಂದಿದ್ದಾರೆ.


