ಇರಾನ್ ಜೊತೆಗಿನ ಯುದ್ಧವು ಮುಂದಿನ ಎರಡರಿಂದ ಮೂರು ವಾರಗಳಲ್ಲಿ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದು, ಅಮೆರಿಕ ಯುದ್ಧ ನಿಲ್ಲಿಸಿದರೂ ನಾವು ಇರಾನ್ ವಿರುದ್ಧದ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಇರಾನ್ ಜೊತೆಗಿನ ಕದನ ವಿರಾಮದ ಬಗ್ಗೆ ಮಾತನಾಡಿ, ಅಮೆರಿಕ ಸೇನೆಯನ್ನು ಹಿಂತೆಗೆದುಕೊಳ್ಳುವ ಸುಳಿವು ನೀಡಿದ್ದರು. ಇರಾನ್ನಲ್ಲಿರುವ ಭಯೋತ್ಪಾದಕ ಆಡಳಿತವನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೆ ಯುದ್ದ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಗುಡುಗಿದೆ.
ಫೆಬ್ರವರಿ 28ರಂದು ಆರಂಭವಾದ ಈ ಯುದ್ಧವು ಮೂರು ರಾಷ್ಟ್ರಗಳಿಗೆ ಸೀಮಿತವಾಗಿ ಉಳಿದಿಲ್ಲ. ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಕಾಡುತ್ತಿದೆ. ಇರಾನ್ ಪರವಾಗಿ ಹೆಜ್ಬೊಲ್ಲಾ ಮತ್ತು ಹೌತಿ ಬಂಡುಕೋರರು ಇಸ್ರೇಲ್ ಮೇಲೆ ನಿರಂತರವಾಗಿ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದ್ದು, ತಾನು ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಘೋಷಿಸಿದೆ.
ಇರಾನ್ನ ಇಂಧನ ಮತ್ತು ಅಣುಶಕ್ತಿ ಕೇಂದ್ರಗಳನ್ನು ನಾಶಪಡಿಸದೆ ಯುದ್ಧ ನಿಲ್ಲಿಸಿದರೆ ಇಸ್ರೇಲ್ನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಅಮೆರಿಕದ ನಿಲುವು ಏನೇ ಇರಲಿ, ನಮ್ಮ ದೇಶದ ಭದ್ರತೆಯ ವಿಷಯದಲ್ಲಿ ನಾವು ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.
ಟ್ರಂಪ್ ಮಾಧ್ಯಮಗಳೊಂದಿಗೆ ಮಾತನಾಡಿ, ಇರಾನ್ನಲ್ಲಿ ಆಡಳಿತ ಬದಲಾವಣೆಯ ಗುರಿಯನ್ನು ಅಮೆರಿಕ ಯಶಸ್ವಿಯಾಗಿ ಸಾಧಿಸಿದೆ. ಹೀಗಾಗಿ ಈ ಸಂಘರ್ಷವನ್ನು ಅನಗತ್ಯವಾಗಿ ಮುಂದುವರಿಸಲು ಅಮೆರಿಕ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ಯುದ್ಧವನ್ನು ಕೊನೆಗೊಳಿಸಲು ಅಧಿಕೃತ ಒಪ್ಪಂದದ ಅಗತ್ಯವಿಲ್ಲ. ಶೀಘ್ರದಲ್ಲೇ ಅಮೆರಿಕ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.


