ಇರಾನ್ನ ಅನಿಲ ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ನಡೆಸುವ ಬಗ್ಗೆ ನಮಗೇನೂ ತಿಳಿದಿರಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ ಕೋಪಗೊಂಡು ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ ಹಾಗೆಯೇ ಕತಾರ್ ಪಾತ್ರ ಇದರಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಕತಾರ್ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಇರಾನ್ಗೆ ಎಚ್ಚರಿಕೆ ನೀಡುತ್ತಾ, ಇರಾನ್ನ ಪ್ರಮುಖ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ಇನ್ನು ಮುಂದೆ ದಾಳಿ ಮಾಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದು ಇಸ್ರೇಲ್ ಕಾರ್ಯಾಚರಣೆ, ಈ ನಿರ್ದಿಷ್ಟ ದಾಳಿಯ ಬಗ್ಗೆ ಅಮೆರಿಕಕ್ಕೆ ಏನೂ ತಿಳಿದಿರಲಿಲ್ಲ, ಕತಾರ್ ದೇಶವು ಯಾವುದೇ ರೀತಿಯಲ್ಲಿ ಭಾಗಿಯಾಗಿರಲಿಲ್ಲ, ಹೀಗೆ ನಡೆಯುತ್ತದೆಂಬ ಕಲ್ಪನೆಯೂ ಅದಕ್ಕೆ ಇರಲಿಲ್ಲ ಎಂದು ಹೇಳಿದರು.
ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಕ್ಷೇತ್ರ ಎಂದು ಹೇಳಲಾಗುವ ಸೌತ್ ಪಾರ್ಸ್ ಮೇಲೆ ನಡೆದ ಬಾಂಬ್ ದಾಳಿಗೆ ಗಲ್ಫ್ನಾದ್ಯಂತ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್ನಲ್ಲಿರುವ ಐದು ಇಂಧನ ಸೌಲಭ್ಯಗಳನ್ನು ಮುಂಬರುವ ಗಂಟೆಗಳಲ್ಲಿ ಗುರಿಯಾಗಿಸಲಾಗುವುದು ಎಂದು ಇರಾನ್ ಎಚ್ಚರಿಸಿದೆ.
ಫೆಬ್ರವರಿ 28 ರಂದು ಇರಾನ್- ಇಸ್ರೇಲ್ ಸಂಘರ್ಷ ಪ್ರಾರಂಭವಾಗಿದ್ದು, ಇಸ್ರೇಲ್ ಮತ್ತು ಅಮೆರಿಕ ಇರಾನ್ನಲ್ಲಿ ಹಲವು ದಾಳಿ ಮಾಡಿವೆ. ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಮೂಲಕ ಇರಾನ್ ಪ್ರತಿಕ್ರಿಯಿಸಿದೆ.


