Menu

ಅಮೆರಿಕ ವಲಸಿಗರಿಗೆ ಕಾನೂನು ರಕ್ಷಣೆಯ ಕಾಯ್ದೆ ರದ್ದುಗೊಳಿಸಿದ ಟ್ರಂಪ್‌

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ವಲಸಿಗರ ಕನಸಿಗೆ ಮತ್ತೊಮ್ಮೆ ಕೊಳ್ಳಿ ಇಟ್ಟಿದ್ದಾರೆ. ಲಕ್ಷಾಂತರ ವಲಸಿಗರ ಕಾನೂನುಬದ್ಧ ರಕ್ಷಣೆಯನ್ನು ರದ್ದುಗೊಳಿಸುವುದಾಗಿ ಅಮೆರಿಕ ಶುಕ್ರವಾರ ಹೇಳಿದ್ದು, ಅವರಿಗೆ ದೇಶ ತೊರೆಯಲು ವಾರಗಳ ಕಾಲಾವಕಾಶ ನೀಡಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಅಭಿಯಾನವನ್ನು ಕೈಗೊಳ್ಳುವುದಾಗಿ ಮತ್ತು ಮುಖ್ಯವಾಗಿ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಿಂದ ಅಕ್ರಮ ವಲಸೆ ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಈ ಆದೇಶವು ಅಕ್ಟೋಬರ್ ೨೦೨೨ರ ನಂತರ ಅಮೆರಿಕ್ಕೆ ಬಂದಿರುವ ಕ್ಯೂಬಾ, ಹೈಟಿ, ನಿಕರಾಗುವಾ ಮತ್ತು ವೆನೆಜುವೆಲಾ ಸೇರಿದಂತೆ ನಾಲ್ಕು ದೇಶಗಳ ಸುಮಾರು ೫,೩೨,೦೦೦ ಜನರಿಗೆ ಅನ್ವಯಿಸುತ್ತದೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್  ಹೇಳಿದ್ದಾರೆ. ಈ ನಾಲ್ಕು ದೇಶದ ಲಕ್ಷಾಂತರ ನಾಗರಿಕರು ಏಪ್ರಿಲ್ ೨೪ರಂದು ಅಥವಾ ಫೆಡರಲ್ ರಿಜಿಸ್ಟರ್ನಲ್ಲಿ ನೋಟಿಸ್ ಪ್ರಕಟವಾದ ೩೦ ದಿನಗಳಲ್ಲಿ ಅಮೆರಿಕದಲ್ಲಿ ಉಳಿಯುವ ತಮ್ಮ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಲಿದ್ದಾರೆ.

ಈ ಹೊಸ ಆದೇಶವು ಈಗಾಗಲೇ ಅಮೆರಿಕದಲ್ಲಿರುವ ಮತ್ತು ಮಾನವೀಯ ಪೆರೋಲ್ ಕಾರ್ಯಕ್ರಮದ ಅಡಿಯಲ್ಲಿ ಅಮೆರಿಕಕ್ಕೆ ಬಂದ ಅರ್ಧ ಮಿಲಿಯನ್ ವಲಸಿಗ ರಲ್ಲಿ “ಬಹುಪಾಲು” ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಕ್ಯಾಲಿಫೋರ್ನಿಯಾದ ವಲಸೆ ವಕೀಲರಾದ ನಿಕೋಲೆಟ್ ಗ್ಲೇಜರ್ ಅವರು ಹೇಳಿದ್ದಾರೆ. ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಇರುವ ದೇಶಗಳ ಜನರು ಅಮೆರಿಕಕ್ಕೆ ಪ್ರವೇಶಿಸಲು ಮತ್ತು ತಾತ್ಕಾಲಿಕವಾಗಿ ವಾಸಿಸಲು ಅಧ್ಯಕ್ಷರು ದೀರ್ಘಕಾಲದಿಂದ ಬಳಸುತ್ತಿ ರುವ ಕಾನೂನು ಸಾಧನವಾದ ಮಾನವೀಯ ಪೆರೋಲ್ನ ದುರುಪಯೋಗವನ್ನು ಕೊನೆಗೊಳಿಸಲು ಆಡಳಿತವು ಕ್ರಮ ಕೈಗೊಳ್ಳುತ್ತಿದೆ.

ಈ ಹೊಸ ಆದೇಶಕ್ಕೂ ಮುನ್ನ, ಮಾನವೀಯ ಪೆರೋಲ್ನಲ್ಲಿ ಬಂದವರು ತಮ್ಮ ಪೆರೋಲ್ ಅವಧಿ ಮುಗಿಯುವವರೆಗೆ ಅಮೆರಿಕದಲ್ಲಿಯೇ ಉಳಿಯಬಹುದಿತ್ತು. ಆದರೆ ಟ್ರಂಪ್ ಆಡಳಿತ ಅವರಿಗೆ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುವ ಆಶ್ರಯ ವೀಸಾಗಳು ಮತ್ತು ಇತರ ವಿನಂತಿಗಳಿಗಾಗಿ ಅವರ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವುದನ್ನು ನಿಲ್ಲಿಸಿದೆ. ಸರ್ಕಾರದ ಈ ನಿರ್ಧಾರವನ್ನು ಈಗಾಗಲೇ ಫೆಡರಲ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದೆ.

Related Posts

Leave a Reply

Your email address will not be published. Required fields are marked *