ಇರಾನ್ ಮುಂದೆ ಅಮೆರಿಕದ ಡೊನಾಲ್ಡ್ ಟ್ರಂಪ್ ಶಾಂತಿ ಪ್ರಸ್ತಾವನೆ ಮಂಡಿಸಿದ್ದು, ಇದಕ್ಕೆ ಇರಾನ್ ಕಠಿಣ ಷರತ್ತುಗಳನ್ನು ವಿಧಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚುವುದು, ಎಲ್ಲಾ ಅಂತರರಾಷ್ಟ್ರೀಯ ನಿರ್ಬಂಧ ತೆಗೆದುಹಾಕುವುದು ಮತ್ತು ಯುದ್ಧ ಪರಿಹಾರ ಪಾವತಿಸುವುದು ಪ್ರಮುಖ ಷರತ್ತುಗಳಾಗಿವೆ.
ಯಾವುದೇ ಒತ್ತಡಕ್ಕೆ ಮಣಿಯದೆ ತನ್ನ ಕ್ಷಿಪಣಿ ಕಾರ್ಯಕ್ರಮವನ್ನು ಮುಂದುವರಿಸಲು ತಾನು ಬದ್ಧವೆಂದು ಇರಾನ್ ಸ್ಪಷ್ಟಪಡಿಸಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಅಮೆರಿಕ ಮೊದಲು ಈ ಬೇಡಿಕೆಗಳನ್ನು ಪೂರೈಸಬೇಕೆಂದು ಇರಾನ್ ಒತ್ತಾಯಿಸಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಸಂಭಾವ್ಯ ಕದನ ವಿರಾಮಕ್ಕೆ ಇರಾನ್ ಕಠಿಣ ಷರತ್ತುಗಳನ್ನು ವಿಧಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಜತೆಗಿನ ಮುಖಾಮುಖಿ ಸಂದರ್ಭ ಯಾವುದೇ ಒತ್ತಡಕ್ಕೆ ತಾನು ಮಣಿಯುವುದಿಲ್ಲ ಎಂದು ಇರಾನ್ ಹೇಳಿದೆ. ಅಮೆರಿಕ ಸಿದ್ಧಪಡಿಸಿದ ಶಾಂತಿ ಪ್ರಸ್ತಾವನೆಯನ್ನು ಇರಾನ್ಗೆ ಕಳುಹಿಸಲಾಗಿದೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಒಪ್ಪಂದವನ್ನು ಬಯಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬಳಿಕ ರಾನ್‌ನ ಸಶಸ್ತ್ರ ಪಡೆಗಳ ಏಕೀಕೃತ ಕಮಾಂಡ್ ಆಗಿರುವ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಇಬ್ರಾಹಿಂ ಝೋಲ್ಫಾಕರಿ, ಅಮೆರಿಕವನ್ನು ಅಪಹಾಸ್ಯ ಮಾಡಿದ್ದರು.
ಇರಾನ್ನ ಮೊದಲ ಬೇಡಿಕೆ ಎಂದರೆ ಅಮೆರಿಕ ಮತ್ತು ಇಸ್ರೇಲ್ ತನ್ನ ಮಿಲಿಟರಿ ನೆಲೆಗಳು, ಇಂಧನ ಮೂಲಸೌಕರ್ಯ ಮತ್ತು ಪರಮಾಣು ಸ್ಥಾವರಗಳ ಮೇಲಿನ ಎಲ್ಲಾ ವಾಯು ಮತ್ತು ಕ್ಷಿಪಣಿದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಸ್ರೇಲ್ ಮತ್ತು ಅಮೆರಿಕವು ತಮ್ಮ ಉಳಿದ ಉನ್ನತ ನಾಯಕರನ್ನು ಗುರಿಯಾಗಿಸಬಾರದು. ಮಾತುಕತೆಗೆ ಬರುವ ಮುನ್ನ ತಮ್ಮ ನಾಯಕರ ಸುರಕ್ಷತೆ ಬಗ್ಗೆ ಖಾತ್ರಿ ಬಯಸುವುದಾಗಿ ಹೇಳಿದೆ.
ಯುದ್ಧ ಮತ್ತು ನಿರಂತರ ನಿರ್ಬಂಧಗಳಿಂದಾಗಿ ಇರಾನ್ ಆರ್ಥಿಕ ಒತ್ತಡದಲ್ಲಿದೆ. ಯಾವುದೇ ಒಪ್ಪಂದದ ಭಾಗವಾಗಿ ತನ್ನ ತೈಲರಫ್ತು ಮತ್ತು ಇಂಧನಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಹೇಳಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತನಾಡಿ, ಇರಾನ್ ಎಂದಿಗೂ ಕದನ ವಿರಾಮಕ್ಕಾಗಿ ಅಮೆರಿಕವನ್ನು ಬೇಡಿಕೊಂಡಿಲ್ಲ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಗತ್ಯವಿರುವಷ್ಟು ಕಾಲ ಹೋರಾಡಲು ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದರು.


