Menu

ಇರಾನ್‌ ನಿರ್ನಾಮ ವಾರ್ನ್‌ ನೀಡಿದ ಟ್ರಂಪ್‌: ಇರಾನ್‌ನಿಂದ ಯುವ ಮಾನವ ಸರಪಳಿ ಅಸ್ತ್ರ

ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ಇರಾನ್‌ ಅನ್ನು ನಿರ್ನಾಮ ಮಾಡುವ ಬೆದರಿಕೆ ಒಡ್ಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮಂಗಳವಾರದ ಡೆಡ್‌ಲೈನ್‌ ನೀಡಿದ್ದಾರೆ. ಈ ಗಡುವು ಸಮೀಪಿಸುತ್ತಿದ್ದಂತೆ ಅಮೆರಿಕವನ್ನು ಮಣಿಸಲು ಇರಾನ್‌ ಹೊಸ ಹೆಜ್ಜೆ ಇಟ್ಟಿದೆ. ತನ್ನ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ನಿರ್ಮಿಸುವಂತೆ ಇಡೀ ದೇಶದ ಯುವ ಸಮೂಹಕ್ಕೆ ಇರಾನ್‌ ಕರೆ ಕೊಟ್ಟಿದೆ.

ಕ್ರೀಡಾಪಟುಗಳು, ಕಲಾವಿದರು, ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ ಇರುವ ಯುವಜನರು ಮಂಗಳವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಪ್ರಮುಖ ಇಂಧನ ಮೂಲ ಸೌಕರ್ಯಗಳು ಹಾಗೂ ವಿದ್ಯುತ್‌ ಸ್ಥಾವರಗಳ ಬಳಿ ಒಟ್ಟುಗೂಡುವಂತೆ ಇರಾನ್‌ನ ಯುವ ಮತ್ತು ಕ್ರೀಡಾ ಸಚಿವಾಲಯ ಹೇಳಿದೆ.

ಹಲವು ವಿಶ್ವವಿದ್ಯಾಲಯದ ಯುವಜನರು, ಯುವ ಕಲಾವಿದರು ಹಾಗೂ ಯುವ ಸಂಘಟನೆಗಳು ದೇಶದ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ರಚಿಸುವಂತೆ ಪ್ರಸ್ತಾಪಿಸಿದ್ದಾರೆ. ʻಉಜ್ವಲ ಭವಿಷ್ಯಕ್ಕಾಗಿ ಇರಾನ್‌ ಯುವಕರ ಮಾನವ ಸರಪಳಿʼ ಘೋಷವಾಕ್ಯದಡಿ ಅಭಿಯಾನ ಆರಂಭಗೊಂಡಿದೆ. ಯುವಜನರ ಭಾಗವಹಿಸುವಿಕೆಯೊಂದಿಗೆ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ರಚನೆಯಾಗಲಿದೆ. ಇದು ಮೂಲ ಸೌಕರ್ಯವನ್ನು ರಕ್ಷಿಸುವ ಮತ್ತು ಇರಾನ್‌ ಉಜ್ವಲ ಭವಿಷ್ಯಕ್ಕಾಗಿ ಯುವಕರ ಬದ್ಧತೆಯನ್ನು ಸೂಚಿಸುವ ಸಂಕೇತವಾಗಲಿದೆ ಎಂದು ಕ್ರೀಡಾ ಸಚಿವಾಲಯದ ಉಪಮುಖ್ಯಸ್ಥ ಅಲಿರೆಜಾ ರಹೀಮಿ ಹೇಳಿದ್ದಾರೆ.

ಇರಾನ್‌ ಕದನ ವಿರಾಮ ಒಪ್ಪಂದ ಮಾಡಿಕೊಳ್ಳದೆ ಹೋದರೆ ಮತ್ತು ಹರ್ಮುಜ್‌ ಜಲಸಂಧಿಯನ್ನು ಮತ್ತೆ ತೆರೆಯಲು ವಿಫಲವಾದರೆ ಇರಾನ್‌ನ ವಿದ್ಯುತ್ ಸ್ಥಾವರಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ ನೀಡಿ, ಅಮೆರಿಕವು ಒಂದೇ ರಾತ್ರಿಯಲ್ಲಿ ಇರಾನ್ ದೇಶವನ್ನೇ ನಾಶಪಡಿಸಬಹುದು. ಅದು ಮಂಗಳವಾರ ರಾತ್ರಿ ಆಗಿರಬಹುದು ಎಂದು ಹೇಳಿದ್ದರು.

Related Posts

Leave a Reply

Your email address will not be published. Required fields are marked *