ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಸುಂಕ ಯುದ್ಧ ಘೋಷಿಸಿರುವ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡುವುದಾಗಿ ಹೇಳಿದ್ದು, ಚೀನಾದ ಮೇಲಿನ ತೆರಿಗೆಯನ್ನು 104% ರಿಂದ 125%ಕ್ಕೆ ಏರಿಸಿ ಭಾರಿ ಹೊಡೆತ ನೀಡಿದ್ದಾರೆ.
ನಾವು ತೆರಿಗೆ ವಿಧಿಸಿದ ಬಳಿಕ 75 ದೇಶಗಳು ತಪ್ಪು ಸರಿಪಡಿಸಿಕೊಂಡು ಪ್ರತಿ ತೆರಿಗೆ ಹಾಕದೆ ಸಂಧಾನಕ್ಕೆ ಬಂದಿವೆ. ಹೀಗಾಗಿ ಅವುಗಳ ಮೇಲೆ ಹೇರಿದ್ದ ತೆರಿಗೆ ಯನ್ನು 90 ದಿನ ಮುಂದೂಡಲು ನಿರ್ಧರಿಸಿದ್ದೇನೆ. ಹೀಗಾಗಿ ಅವುಗಳ ಮೇಲೆ 10% ತೆರಿಗೆ ಮಾತ್ರ ಮುಂದುವರಿಯಲಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಅಮೆರಿಕದ ಉತ್ಪನ್ನಗಳಿಗೆ ಚೀನಾ 84% ತೆರಿಗೆ ಹಾಕಿದೆ. ಹೀಗಾಗಿ ಕೂಡಲೇ ಜಾರಿಗೆ ಬರುವಂತೆ ಚೀನಾದಿಂದ ಆಮದಾಗುವ ವಸ್ತುಗಳಿಗೆ 125% ತೆರಿಗೆಯನ್ನು ಹೆಚ್ಚಿಸುತ್ತೇನೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಜಗತ್ತಿನ ನಂಬರ್ 1 ಆರ್ಥಿಕತೆ ಹೊಂದಿರುವ ಅಮೆರಿಕ ಮತ್ತು ನಂಬರ್ 2 ಆರ್ಥಿಕತೆ ಹೊಂದಿರುವ ಚೀನಾದ ಮಧ್ಯೆ ವಾಣಿಜ್ಯ ಸಮರಕ್ಕೆ ವಿಶ್ವವೇ ತಲ್ಲಣಗೊಂಡಿದೆ.