ಅಮೆರಿಕದ ಟೆಕ್ಸಾಸ್ನಲ್ಲಿ ಸ್ಥಾಪಿಸಲಾಗಿರುವ ೯0 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಡ್ರೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ನಾಯಕರೊಬ್ಬರು ಅವಮಾನಿಸಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ನಮ್ಮದು ಕ್ರಿಶ್ಚಿಯನ್ ರಾಷ್ಟ್ರ, ಆದರೂ ಸುಳ್ಳು ಹಿಂದೂ ದೇವರ ಪ್ರತಿಮೆಯನ್ನು ಇಲ್ಲೇಕೆ ನಿರ್ಮಿಸಲು ಅನುಮತಿ ನೀಡಿದ್ದೇವೆ ಎಂದು ಸ್ಥಳೀಯ ರಿಪಬ್ಲಿಕನ್ ನಾಯಕ ಮತ್ತು ಸೆನೆಟ್ ಅಭ್ಯರ್ಥಿ ಅಲೆಕ್ಸಾಂಡರ್ ಡಂಕನ್ ಪ್ರಶ್ನಿಸಿದ್ದಾರೆ.
ಈ ಮೂಲಕ ಅವರು ಹಿಂದೂ ಸಮುದಾಯ ಮತ್ತು ಇತರರ ಭಾವನೆಗಳನ್ನು ನೋವುಂಟು ಮಾಡಿದ್ದಾರೆ. ಟೆಕ್ಸಾಸ್‌ನ ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಹನುಮಾನ್ ಜೊತೆಗೆ ಇರುವ ವಿಗ್ರಹದ ವೀಡಿಯೊವನ್ನು ಕೂಡ ಅಲೆಕ್ಸಾಂಡರ್ ಡಂಕನ್ ಹಂಚಿಕೊಂಡಿದ್ದಾರೆ.
ಅಲೆಕ್ಸಾಂಡರ್ ಡಂಕನ್ ಅವರ ಹೇಳಿಕೆಗೆ ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾಗಿದೆ. ಹಿಂದೂ ಅಮೆರಿಕನ್ ಫೌಂಡೇಶನ್ ಅವರ ಹೇಳಿಕೆಯನ್ನು ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ ಎಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದೂರು ನೀಡಿದೆ.
ಅಲೆಕ್ಸಾಂಡರ್ ಡಂಕನ್ ಟೆಕ್ಸಾಸ್‌ನ ರಿಪಬ್ಲಿಕನ್ ಪಕ್ಷದವರಾಗಿದ್ದು, 2026 ರ ಯುಎಸ್ ಸೆನೆಟ್ ಚುನಾವಣೆಯಲ್ಲಿ ಟೆಕ್ಸಾಸ್ ಪ್ರತಿನಿಧಿಸಲು ತಮ್ಮ ಉಮೇದುವಾರಿಕೆ ಘೋಷಿಸಿದ್ದಾರೆ. ಅವರು 12 ವರ್ಷ ಪೊಲೀಸ್ ಅಧಿಕಾರಿಯಾಗಿದ್ದರು. ಡಂಕನ್ ತಮ್ಮನ್ನು ತಾವು ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳುತ್ತಾರೆ.
ಡಂಕನ್ ಹೇಳಿಕೆಯು ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುತ್ತದೆ ಮತ್ತು ಅಮೆರಿಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಫೌಂಡೇಶನ್ ಪ್ರತಿಪಾದಿಸಿದೆ. ಶುಗರ್ ಲ್ಯಾಂಡ್‌ನ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಹನುಮ ಪ್ರತಿಮೆಯನ್ನು 2024ರ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಉದ್ಘಾಟಿಸಲಾಗಿದೆ.