ಕುಂಭಮೇಳದಲ್ಲಿ ಸಂಭವಿಸಿರುವ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಮುಚ್ಚಿಡಲು ಸರ್ಕಾರ, ಶವಗಳನ್ನು ನದಿಗೆ ಎಸೆದಿದೆ. ಇದರಿಂದ ತ್ರಿವೇಣಿ ಸಂಗಮ ಮಲಿನವಾಗಿದೆ ಎಂದು ಎಸ್ಪಿ ಸಂಸದೆ ಜಯಾ ಬಚ್ಚನ್ ಹೇಳಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
ಕಾಲ್ತುಳಿತ ದುರಂತ ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ್ದು, ಸಾವುಗಳ ಬಗ್ಗೆ ಯುಪಿ ಸರ್ಕಾರ ಅಧಿಕೃತ ಅಂಕಿ ಸಂಖ್ಯೆ ನೀಡದ್ದನ್ನೇ ಅಸ್ತ್ರ ಮಾಡಿಕೊಂಡು ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.
ಈ ಸಾವುಗಳ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜಯಾ ಬಚ್ಚನ್, ಕಾಲ್ತುಳಿತದ ಸಂದರ್ಭದಲ್ಲಿ ಸಂಭವಿಸಿದ ಸಾವುಗಳ ನಿಜವಾದ ಅಂಕಿ ಅಂಶಗಳನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ ಕುಂಭಮೇಳ ದುರಂತದ ಘಟನೆ ದುರದೃಷ್ಟಕರ ಮತ್ತು ಕಳವಳಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಯುಪಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಭಕ್ತರ ಸುರಕ್ಷತೆಗೆ ಸೂಕ್ತ ಆದೇಶ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿ ಹೈಕೋರ್ಟ್‌ಗೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿದೆ.