Menu

ಪಾಕಿಸ್ತಾನಕ್ಕೆ ಒಂದೇ ದಿನ ತ್ರಿಬಲ್ ಶಾಕ್: ಆಮದು, ಬಂದರು ಬಳಕೆ, ಸಂವಹನಕ್ಕೆ ಭಾರತ ಬ್ರೇಕ್

india- pakistan

ನವದೆಹಲಿ: ಪೆಹಲ್ಗಾವ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಉಗ್ರರಿಗೆ ನೆರವು ನೀಡುತ್ತಿರುವ ಪಾಕಿಸ್ತಾನದ ಮೇಲೆ ಭಾರತ ನಿರ್ಬಂಧಗಳನ್ನು ವಿಧಿಸುವ ಮೂಲಕ ಶಾಕ್ ಮೇಲೆ ಶಾಕ್ ನೀಡಿದೆ.

ಭಾರತದ ರಾಷ್ಟ್ರೀಯ ಹಿತಾಸಕ್ತಿ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಥವಾ ಉಚಿತವಾಗಿ ಬರುತ್ತಿದ್ದ ಎಲ್ಲಾ ವಸ್ತುಗಳ ಮೇಲೆ ನಿಷೇಧ ಹೇರಿದೆ. ಅಲ್ಲದೇ ಬಂದರುಗಳ ಬಳಕೆ ಹಾಗೂ ಸಂವಹನಕ್ಕಾಗಿ ಬಳಸಲಾಗುತ್ತಿದ್ದ ಅಂಚೆ, ಪೋಸ್ಟಲ್, ಕೊರಿಯರ್ ಮುಂತಾದ ಸೇವೆಗಳನ್ನು ನಿಷೇಧಿಸಿದೆ.

ಕೇಂದ್ರ ಸರ್ಕಾರ ಪಾಕಿಸ್ತಾನದ ಎಲ್ಲಾ ವಸ್ತುಗಳ ಮೇಲಿನ ಆಮದು ನಿಷೇಧಿಸಿರುವ ಆದೇಶ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ. ಮುಂದಿನ ಆದೇಶ ನೀಡುವವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೇಂದ್ರ ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಆಮದು ಮತ್ತು ರಫ್ತಿಗೆ ಇದ್ದಿದ್ದ ಏಕೈಕ ಮಾರ್ಗವಾಗಿದ್ದ ವಾಘಾ ಗಡಿಯನ್ನು ಎರಡೂ ದೇಶಗಳು ಪೆಹಲ್ಗಾವ್ ದಾಳಿ ಹಿನ್ನೆಲೆಯಲ್ಲಿ ಈಗಾಗಲೇ ಮುಚ್ಚಿವೆ.

ಪಾಕಿಸ್ತಾನದಿಂದ ಪ್ರಮುಖವಾಗಿ ವೈದ್ಯಕೀಯ ಉಪಕರಣ, ಹಣ್ಣುಗಳು, ಅಡುಗೆ ಎಣ್ಣೆ ಆಮದು ಆಗುತ್ತಿದ್ದವು. 2019ರ ಪುಲ್ವಾಮಾ ದಾಳಿ ನಂತರ ಈ ವಸ್ತುಗಳ ಆಮದು ಸುಂಕವನ್ನು ಶೇ.200ರಷ್ಟು ಏರಿಕೆ ಮಾಡಿದ್ದರಿಂದ ಆಮದು ಪ್ರಮಾಣದಲ್ಲಿ ಭಾರೀ ಕುಸಿತ ಉಂಟಾಗಿತ್ತು.

ಪ್ರಸ್ತುತ ಪಾಕಿಸ್ತಾನದಿಂದ ಶೇ. 0.0001ರಷ್ಟು ವಸ್ತುಗಳು ಮಾತ್ರ ಭಾರತಕ್ಕೆ ಆಮದು ಆಗುತ್ತಿದ್ದವು. ಪಾಕಿಸ್ತಾನದ ವಸ್ತುಗಳ ಆಮದು ನಿಷೇಧ ಹೇರಿಕೆಯಿಂದ ಯಾವುದೇ ಮಹತ್ವದ ಸಾಧನೆ ಅಲ್ಲ ಎಂದು ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *