ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಜನವರಿ 29ರಂದು ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಸಲಿದ್ದಾರೆ.
ಜನವರಿ 29ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದು, ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಈ ನಿರ್ಧಾರ ಪ್ರಕಟಿಸಿದೆ. ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಂಟಿ ಕ್ರಿಯಾ ಸಮಿತಿ ಪತ್ರ ಬರೆದಿದೆ. 38 ತಿಂಗಳಿನಿಂದ ವೇತನ ಹಿಂಬಾಕಿ ಬಂದಿಲ್ಲ. ಹಲವು ಬಾರಿ ಮನವಿ ಮಾಡಿದರೂ ಅದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದು ಕ್ರಿಯಾಸಮಿತಿ ಅಧ್ಯಕ್ಷ ಅನಂತಸುಬ್ಬರಾವ್ ತಿಳಿಸಿದ್ದಾರೆ.
ಸಾರಿಗೆ ನೌಕರರಿಗೆ 38 ತಿಂಗಳಿನಿಂದ ಬಾಕಿ ವೇತನ ಬಂದಿಲ್ಲ. 2024ರ ಜನವರಿ 1ರಿಂದ ಬರಬೇಕಿದ್ದ ವೇತನ ಪರಿಷ್ಕರಣೆ ಇನ್ನೂ ಜಾರಿಗೆ ಬಂದಿಲ್ಲ. ನೌಕರರಿಗೆ ವೇತನ ಪರಿಷ್ಕರಣೆ ವಿಳಂಬವಾಗುತ್ತಿರುವುದರಿಂದ ಆರ್ಥಿಕ ಒತ್ತಡ ಹೆಚ್ಚಾಗುತ್ತಿದೆ. ಕುಟುಂಬ ನಿರ್ವಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಅಳಲು ತೋಡಿಕೊಂಡಿದ್ದಾರೆ.
2026ರ ಜ.1ರಿಂದ ಮುಂದಿನ 6 ತಿಂಗಳವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ಮಾಡುವಂತಿಲ್ಲ ಎಂದು ಸರ್ಕಾರ ಸಾರಿಗೆ ನೌಕರರಿಗೆ ಅಧಿಸೂಚನೆ ಹೊರಡಿಸಿದೆ.
ಯಾವುದೇ ಸಂದರ್ಭದಲ್ಲಿಯೂ ಮುಷ್ಕರ ಮಾಡಬಾರದು ಎಂದು ಮುಷ್ಕರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಉಲ್ಲಂಘಿಸಿದಲ್ಲಿ ಎಸ್ಮಾ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಸರ್ಕಾರದ ಆದೇಶದ ಪ್ರತಿಯನ್ನು ಸಂಸ್ಥೆಯ ಎಲ್ಲಾ ಘಟಕಗಳು ಹಾಗೂ ನೌಕರರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.


