ಕರ್ನೂಲ್ನಲ್ಲಿ ಖಾಸಗಿ ಬಸ್ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಸುರಕ್ಷತಾ ಕ್ರಮಗಳ ಬಗ್ಗೆ ಚಿಂತನೆ ನಡೆಸಿದೆ. ರಾಜ್ಯದ 4 ಸಾರಿಗೆ ನಿಗಮಗಳ ಎಂಡಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದು, ಸುರಕ್ಷತಾ ಕ್ರಮಗಳ ಪರಿಶೀಲನೆ ಬಗ್ಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಬಸ್ಗಳಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸಬೇಕು. ಬಸ್‌ಗಳಲ್ಲಿ ಬೇಗನೆ ಉರಿಯುವ ಸಾಧ್ಯತೆಯುಳ್ಳ ಅಥವಾ ಸ್ಫೋಟಕ ವಸ್ತು ಸಾಗಿಸಬಾರದು.ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭ ಕಿಟಕಿ ಒಡೆಯಲು ಕಡ್ಡಾಯವಾಗಿ ಸುತ್ತಿಗೆಗಳು ಇರಬೇಕು, ಲಗೇಜ್ ಸಾಗಿಸುವ ಜಾಗದಲ್ಲಿ ಯಾರೇ ಆಗಲಿ ಮಲಗಲು ಅವಕಾಶ ನೀಡಬಾರದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬಸ್ಗಳ ನವೀಕರಣ ಬಗ್ಗೆ ಪರಿಶೀಲನೆ ನಡೆಸಬೇಕು. ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನ್ಯೂನತೆ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗು ವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಅಕ್ಟೋಬರ್ 24 ರ ಮುಂಜಾನೆ ಆಂಧ್ರ ಪ್ರದೇಶದ ಕರ್ನೂಲ್ ಬಳಿ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ವಿ. ಕಾವೇರಿ ಟ್ರಾವೆಲ್ಸ್ಗೆ ಸೇರಿದ ಬಸ್ ಬೆಂಗಳೂರಿಗೆ ಹೋಗುತ್ತಿದ್ದಾಗ ಬೈಕ್ ಗುದ್ದಿ ಬಸ್‌ನ ತೈಲ ಟ್ಯಾಂಕರ್ ಒಡೆದು ಬೆಂಕಿ ಹೊತ್ತಿಕೊಂಡು 20ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಬಳಿಕ ರಾಜ್ಯದ ಸಾರಿಗೆ ಬಸ್ಗಳ ಬಗ್ಗೆ ಕಳವಳ ವ್ಯಕ್ತವಾಗಿತ್ತು. ತಕ್ಷಣವೇ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಸಾರಿಗೆ ಸಚಿವರು ಸೂಚಿಸಿದ್ದಾರೆ.


