ರಾಜ್ಯ ಸಾರಿಗೆ ನೌಕರರ ಪ್ರತಿಭಟನೆಯಿಂದ ರಾಜ್ಯದ ನಾನಾ ಕಡೆ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವೆಡೆ ಖಾಸಗಿ ಬಸ್‌ಗಳನ್ನು ಸರ್ಕಾರ ನಿಯೋಜಿಸಿದ್ದರೆ, ಹಲವೆಡೆ ಕಡಿಮೆ ಸಂಖ್ಯೆಯಲ್ಲಿ ಸರ್ಕಾರಿ ಬಸ್ಸುಗಳುಸಂಚರಿಸುತ್ತಿವೆ.
ಬೆಂಗಳೂರಿನ ಸುತ್ತಮುತ್ತ ಬಸ್‌ಗಳ ಸಂಚಾರಕ್ಕೆ ಹೆಚ್ಚಿನ ತೊಡಕುಂಟಾಗಿಲ್ಲ. ಬಸ್ಸುಗಳು ರಸ್ತೆಗಿಳಿಯಲಾರಂಭಿಸಿವೆ. ಮೈಸೂರಿನಿಂದ ನಾನಾ ತಾಲೂಕು, ಮಂಡ್ಯ, ಚಾಮರಾಜನಗರ ಮತ್ತು ಬೆಂಗಳೂರಿಗೆ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಖಾಸಗಿ ಬಸ್‌ಗಳು ಅಧಿಕೃತವಾಗಿ ಸಬ್ ಅರ್ಬನ್ ನಿಲ್ದಾಣದ ಒಳ ಭಾಗದಿಂದಲೇ ಸಂಚಾರ ಆರಂಭಿಸಿವೆ. ಹಾಸನದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬಸ್‌ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ತುರ್ತು ಅಗತ್ಯಗಳಿಗೆ ಜನ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಕೆಎಸ್‌ಆರ್‌ಟಿಸಿ ಘಟಕದ 103 ಬಸ್ ಸೇರಿ 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ರಾಮನಗರದಲ್ಲೂ ಸಾರ್ವಜನಿಕರು ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆ ಉಂಟಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಅಧಿಕೃತವಾಗಿಯೇ ಓಡಾಟ ನಡೆಸುತ್ತಿವೆ. ಬೆಂಗಳೂರು, ಮಾಗಡಿ, ಕನಕಪುರ ಭಾಗಕ್ಕೆ ಖಾಸಗಿ ಬಸ್ ಸಂಚಾರ ನಡೆಸುತ್ತಿವೆ.
ಧಾರವಾಡದಲ್ಲೂ ಸಾರಿಗೆ ಸಂಸ್ಥೆ ಬಸ್‌ಗಳು ಸೇರಿದಂತೆ ಬಿಆರ್‌ಟಿಎಸ್ ಸಂಸ್ಥೆಯ ಬಸ್‌ಗಳೂ ರಸ್ತೆಗಿಳಿದಿಲ್ಲ. ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ. ಬೇಂದ್ರೆ ನಗರ ಸಾರಿಗೆ ಮತ್ತು ಇತರ ಖಾಸಗಿ ವಾಹನಗಳು ಓಡಾಡುತ್ತಿವೆ. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಬೀದರ್, ಕಲಬುರಗಿ, ಹುಮ್ನಾಬಾದ್, ಭಾಲ್ಕಿ, ಹೈದ್ರಾಬಾದ್, ಸೇರಿದಂತೆ ಹಲವು ಕಡೆ ಹೋಗಲು ಬಸ್‌ಗಾಗಿ ಪ್ರಯಾಣಿಕರು ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವಿಲ್ಲ, ಖಾಸಗಿ ಬಸ್‌ಗಲೂ ಇಲ್ಲ. ಬಸ್ ನಿಲ್ದಾಣ ವ್ಯಾಪ್ತಿಯ 1 ಕಿಮೀ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವಿಜಯಪುರದಲ್ಲಿ ಜನ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ 773 ಬಸ್‌ಗಳು ಸಂಚಾರ ಮಾಡುತ್ತವೆ. ಈವರೆಗೆ 43 ಬಸ್‌ಗಳಷ್ಟೇ ಓಡುತ್ತಿವೆ. 260 ಸಿಬ್ಬಂದಿಯಲ್ಲಿ 86 ಜನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಖಾಸಗಿ ಬಸ್ ವ್ಯವಸ್ಥೆ ಇಲ್ಲದೆ ಜನ ನಿಲ್ದಾಣದಲ್ಲೇ ನಿಂತಿದ್ದಾರೆ.
ಬೆಳಗಾವಿ, ಚಿಕ್ಕೋಡಿ ಎರಡೂ ವಿಭಾಗದಲ್ಲಿ ಬಹುತೇಕ ಸಾರಿಗೆ ಸಿಬ್ಬಂದಿ ಗೈರಾಗಿದ್ದಾರೆ. ಪ್ರತಿನಿತ್ಯ ಜಿಲ್ಲೆಯಲ್ಲಿ 700ಕ್ಕೂ ಬಸ್‌ಗಳು ಕಾರ್ಯಾಚರಣೆ ನಡೆಸುವುದು. ಚಿಕ್ಕೋಡಿ ವಿಭಾಗದಲ್ಲಿ 668 ಬಸ್‌ಗಳ ಸಂಚಾರವಿರುತ್ತದೆ. ಎರಡೂ ವಿಭಾಗಗಳಲ್ಲಿ 4,300ಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಇಂದು ಬಂದ್ ಹಿನ್ನೆಲೆ ಸಿಬ್ಬಂದಿ ಗೈರಾಗಿದ್ದಾರೆ. ರಾತ್ರಿ ಹಾಗೂ ದೂರದ ಊರುಗಳಿಗೆ ತೆರಳಿದ್ದ ಬಸ್‌ಗಳಷ್ಟೇ ಡಿಪೋಗಳಿಗೆ ವಾಪಸ್ ಆಗುತ್ತಿದ್ದು, ನಿಲ್ದಾಣದಿಂದ ಯಾವುದೇ ಬಸ್ ಹೊರಡುತ್ತಿಲ್ಲ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಬಳ್ಳಾರಿ ವಿಭಾಗ ವ್ಯಾಪ್ತಿಯ 2,500 ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಇರುವ 450 ಬಸ್‌ಗಳ ಸಂಚಾರ ಸ್ತಬ್ಧಗೊಂಡಿವೆ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದಾರೆ. 100 ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಚಿಕ್ಕಬಳ್ಳಾಪುರದಲ್ಲಿ 7 ಗಂಟೆ ವೇಳೆಗೆ 120 ಬಸ್ ಆಪರೇಟ್ ಬದಲು 60 ಬಸ್‌ಗಳು ಸಂಚರಿಸುತ್ತಿವೆ. ಶೇ.50 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರೂ ಡಿಪೋದಿಂದ ಬಸ್ ತೆಗೆಯಲು ಹಿಂದೇಟು ಹಾಕಿದ್ದಾರೆ.
ಚಿಕ್ಕಮಗಳೂರು ವಿಭಾಗದ 6 ಡಿಪೋಗಳ 560 ಬಸ್‌ಗಳು ಸ್ಥಗಿತಗೊಂಡಿವೆ. ಪ್ರಯಾಣಿಕರ ಸಂಖ್ಯೆ ಕೂಡ ವಿರಳವಾಗಿದೆ. ಚಾಮರಾಜನಗರದಲ್ಲಿ ಒಂದು ಬಸ್ ಕೂಡ ರಸ್ತೆಗಿಳಿದಿಲ್ಲ. ವಿದ್ಯಾರ್ಥಿಗಳು, ನೌಕರರು ಬಸ್ಸಿಲ್ಲದೇ ಪರದಾಡುತ್ತಿದ್ದಾರೆ. ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಘಟಕದಿಂದ ಬೇರೆ ಜಿಲ್ಲೆಗಳಿಗೆ ಕೆಲವು ಬಸ್‌ಗಳು ಸಂಚಾರ ನಡೆಸುತ್ತಿದ್ದರೆ, ಕೆಲವು ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಚಿತ್ರದುರ್ಗದ ಸಾರಿಗೆ ಬಸ್ ನಿಲ್ದಾಣ ಖಾಲಿಯಾಗಿದೆ. ಜನ ಖಾಸಗಿ ಬಸ್ ಹಾಗೂ ಗೂಡ್ಸ್ ವಾಹಗಳ ಮೊರೆ ಹೋಗುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಜನದಟ್ಟಣೆ ಕಡಿಮೆಯಿದೆ. ಕೆಲವರು ಖಾಸಗಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ 8 ಡಿಪೋಗಳಿಂದ ನಿತ್ಯ 561 ಬಸ್‌ಗಳು ಸಂಚರಿಸುತ್ತಿದ್ದವು. ಒಂದೇ ಒಂದು ಬಸ್ ರಸ್ತೆಗಿಳಿದಿಲ್ಲ. ರಾತ್ರಿ ತೆರಳಿದ್ದ ಬಸ್‌ಗಳಷ್ಟೇ ಡಿಪೋಗಳಿಗೆ ವಾಪಸ್ ಆಗುತ್ತಿವೆ. ಜನ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ.
ಕಲಬುರಗಿಯ ಕೇಂದ್ರಿಯ ಬಸ್ ನಿಲ್ದಾಣದಿಂದ ವಿಜಯಪುರ, ಬೀದರ್ ಜಿಲ್ಲೆಗಳಿಗೆ ಖಾಸಗಿ ಬಸ್ ಗಳನ್ನು ಬಿಡಲಾಗಿದೆ. ಸಾರಿಗೆ ಬಸ್‌ನ ದರದಲ್ಲಿಯೇ ಖಾಸಗಿ ಬಸ್ ಟಿಕೆಟ್ ನೀಡಲಾಗುತ್ತಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರು ಎದುರು ನಿಂತು ಪ್ರಯಾಣಿಕರಿಗೆ ಟಿಕೆಟ್ ಕೊಡಿಸುವ ಕೆಲಸ ಮಾಡಿದ್ದಾರೆ. ಹುಬ್ಬಳ್ಳಿಯಲ್ಲೂ ಜನ ಬಸ್ಸಿಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಸಾರ್ವಜನಿಕರೇ ಫ್ರೀ ಯೋಜನೆಗಳನ್ನ ಕಡಿತಗೊಳಿಸುವಂತೆ ಒತ್ತಡ ಹೇರಿದ್ದಾರೆ. ಎನ್‌ಡಬ್ಯುಕೆಎಸ್‌ಆರ್‌ಟಿಸಿ ಎಂಡಿ ಪ್ರಿಯಾಂಗ್ ಸಾರ್ವಜನಿಕರಂತೆ ಖಾಸಗಿ ಬಸ್‌ನಲ್ಲೇ ಪ್ರಯಾಣ ಮಾಡಿದ್ದಾರೆ. ಹಾವೇರಿಯಲ್ಲೂ ರಾತ್ರಿ ಹೋಗಿರುವ ಬಸ್‌ಗಳು ನಿಲ್ದಾಣಕ್ಕೆ ಬರುತ್ತಿವೆ. ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ದಾವಣಗೆರೆ ಕಡೆ ಹೋಗಲು ಜನಕ್ಕೆ ತೊಂದರೆಯಾಗಿದೆ.
ಕೋಲಾರದಲ್ಲೂ ಬಸ್ ಇಲ್ಲದೆ ಜನರು ಪರದಾಡುವಂತಾಗಿದೆ, ಕೋಲಾರ ಗಲ್ ಪೇಟೆ ಪೊಲೀಸರು ನಿಲ್ದಾಣದಲ್ಲಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಿಲ್ಲೆಯ 5 ಘಟಕಗಳಲ್ಲಿರುವ 1,900 ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿದ್ದಾರೆ. ಮ್ಯಾಕ್ಸಿಕ್ಯಾಬ್ ಸೇರಿ 640 ಖಾಸಗಿ ವಾಹನಗಳಿವೆ. ಅವುಗಳ ಬಳಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಬೆಂಬಲ ವ್ಯಕ್ತವಾಗಿದೆ. ಬೆರಳೆಣಿಕೆಯ ಬಸ್ ಗಳು ಮಾತ್ರ ಸಂಚಾರ ಮಾಡಿದ್ದು, ಪ್ರಯಾಣಿಕರು ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.
ರಾಯಚೂರಿನಲ್ಲಿ ಬರುವ ಬಸ್‌ಗಳನ್ನ ಡಿಪೋಕ್ಕೆ ಕಳುಹಿಸಲಾಗುತ್ತಿದೆ. ಡಿಪೋದಿಂದ ಯಾವುದೇ ಬಸ್‌ಗಳು ಹೊರಬರುತ್ತಿಲ್ಲ. ದೂರದ ಊರುಗಳಿಂದ ಬಂದ ಪ್ರಯಾಣಿಕರು ಗ್ರಾಮೀಣ ಭಾಗಗಳಿಗೆ ಬಸ್ ಇಲ್ಲದೆ ಪರದಾಡುತ್ತಿದ್ದಾರೆ. ರಾಯಚೂರು ವಿಭಾಗದ 600 ಬಸ್‌ಗಳ ಓಡಾಟ ಬಂದ್ ಆಗಿದೆ. ರಾಯಚೂರಿನಿಂದ ಹೊರಡುವ 250 ಬಸ್ ಗಳ ಓಡಾಟ ಸ್ಥಗಿತವಾಗಿದೆ. ಯಾದಗಿರಿಯಲ್ಲೂ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ನಾನಾ ಕಡೆಗಳಿಂದ ಆಗಮಿಸಿರುವ ಪ್ರಯಾಣಿಕರು ಊರಿಗೆ ತೆರಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.