Menu

ಸಾರಿಗೆ ನಿಗಮಗಳಿಗೆ 5 ವರ್ಷಗಳಲ್ಲಿ 5,200 ಕೋಟಿ ನಷ್ಟ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ತೈಲಬೆಲೆ ಏರಿಕೆ, ಸಿಬ್ಬಂದಿ ವೇತನ ಸೇರಿದಂತೆ ಆರ್ಥಿಕ ಸೌಲಭ್ಯ ನಿರ್ವಹಣೆಯಿಂದಾಗಿ ಕಳೆದ ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಧೀನದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ 5,200 ಕೋಟಿ ನಷ್ಟವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ವಿಧಾನಪರಿಷತ್ ನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ 5 ವರ್ಷಗಳಲ್ಲಿ ಕೆಎಸ್​ಆರ್​ಟಿಸಿಗೆ 1500 ಕೋಟಿ, ಬಿಎಂಟಿಸಿಗೆ 1544 ಕೋಟಿ. ಕೆಕೆಆರ್​ಟಿಸಿಗೆ 777 ಕೋಟಿ, ಎನ್​ಡಬ್ಲೂಕೆಆರ್​ಟಿಸಿಗೆ 1386 ಕೋಟಿ ನಷ್ಟವಾಗಿದೆ ಎಂದು ತಿಳಿಸಿದರು.

ಸರ್ಕಾರದಿಂದ ಶಕ್ತಿ ಯೋಜನೆಯ ಪೂರ್ತಿ ಮೊತ್ತ ಪಡೆಯಬೇಕಿದೆ. ಶೇ 40 ರಷ್ಟು ಬಸ್​ಗಳು ನಷ್ಟದಲ್ಲೇ ಓಡುತ್ತಿವೆ. ಶೇ 30ರಷ್ಟು ಬಸ್​ಗಳು ಯಾವುದೇ ಲಾಭ-ನಷ್ಟ ಇಲ್ಲದೆ ಓಡುತ್ತಿವೆ. ಶೇ 30ರಷ್ಟು ಬಸ್​ಗಳು ಮಾತ್ರ ಲಾಭದಲ್ಲಿವೆ. ಸಾರಿಗೆ ಇಲಾಖೆಯಲ್ಲಿ ಪ್ರತಿದಿನ 9.45 ಕೋಟಿ ಖರ್ಚಾಗಲಿದೆ ಎಂದರು.

ನಷ್ಟ ಸರಿದೂಗಿಸಲು ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಪುನಶ್ವೇತನಕ್ಕೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇಂಧನ ಬೆಲೆ ಹೆಚ್ಚಳದೊಂದಿಗೆ ಸಿಬ್ಬಂದಿ ಹಾಗೂ ವಾಹನ ಬಿಡಿಭಾಗಗಳು ಅಧಿಕಗೊಂಡಿವೆ. ಆರ್ಥಿಕ ಹೊರೆ ಉಂಟಾಗಿದ್ದರಿಂದ ಕಳೆದ ಜನವರಿಯಲ್ಲಿ ಬಸ್​ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿದೆ‌‌.

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ 2024-25ನೇ ಸಾಲಿನಲ್ಲಿ ಮೀಸಲಿಟ್ಟಿದ್ದ 9,978 ಕೋಟಿ ಅನುದಾನ ಪೈಕಿ 7,796 ಕೋಟಿ ಈಗಾಗಲೇ ಮಂಜೂರಾಗಿದೆ. ಬಾಕಿ ಸುಮಾರು 2 ಸಾವಿರ ಕೋಟಿ ಬಿಡುಗಡೆಯಾಗಬೇಕಿದೆ. ಅನುದಾನ ಮಂಜೂರಾದ ಬಳಿಕ ಸಾರಿಗೆ ನಿಗಮಗಳಿಗೆ ನೀಡಲಾಗುವುದು ಎಂದು ಉತ್ತರಿಸಿದರು.

ರಾಜ್ಯ ಸರ್ಕಾರ ಅಧಿಕಾರ ಬಂದ ಬಳಿಕ ಇದುವರೆಗೂ 5360 ಬಸ್ ಖರೀದಿಸಿದೆ. ಬಿಎಂಟಿಸಿ ನಿಗಮ ಹೊರತುಪಡಿಸಿದರೆ ಹಿಂದಿನ ಸರ್ಕಾರವು ಇನ್ನಿತರ ಸಾರಿಗೆ ನಿಗಮಗಳಿಗೆ ಬಸ್ ಖರೀದಿಗೆ ಮುಂದಾಗಿರಲಿಲ್ಲ. 2016ರಿಂದ 23ರವರೆಗೆ 14 ಸಾವಿರ ಮಂದಿ ನೌಕರರು ನಿವೃತ್ತರಾಗಿದ್ದರಿಂದ ನೇಮಕಾತಿ ನಡೆದಿರಲಿಲ್ಲ‌. ಖಾಲಿ ಹಾಗೂ ತೆರವಾಗಿರುವ ಹುದ್ದೆಗಳ ಭರ್ತಿಗಾಗಿ 9 ಸಾವಿರ ಮಂದಿಯನ್ನು ನೇಮಕಾತಿ ಮಾಡಲಾಗಿದೆ.

1 ಸಾವಿರ ಮಂದಿಗೆ ಅನುಕಂಪ ಆಧಾರದ ಮೇರೆಗೆ ಉದ್ಯೋಗ ನೀಡಲಾಗಿದೆ. ದಿನಕ್ಕೆ 1.96 ಲಕ್ಷ ಟ್ರಿಪ್​ಗಳು ಸಾರಿಗೆ ನಿಗಮಗಳ ಬಸ್​ಗಳು ಕಾರ್ಯಾಚರಣೆ ನಡೆಸುತ್ತಿವೆ. ಸಧೃಢ ಆರೋಗ್ಯಕ್ಕಾಗಿ ಕೆಎಸ್​ಆರ್​ಟಿಸಿ ನೌಕರರು ವಂತಿಗೆ ರೂಪದಲ್ಲಿ ಮಾಸಿಕ 650 ರೂಪಾಯಿ ಪಾವತಿಸಿದರೆ ನೌಕರನ ಕುಟುಂಬಸ್ಥರು ಚಿಕಿತ್ಸೆ ಪಡೆಯಬಹುದಾಗಿದೆ. ಇನ್ನುಳಿದ ಸಾರಿಗೆ ನಿಗಮಗಳಿಗೆ ಯೋಜನೆ ವಿಸ್ತರಿಸಿದ್ದು, ನೌಕರರಿಂದ ದಾಖಲಾತಿ ಪಡೆಯಲಾಗುತ್ತಿದೆ. ಇನ್ನೂ ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಒಡಂಬಡಿಕೆಯಾದ ರಾಜ್ಯದ 350 ಆಸ್ಪತ್ರೆಗಳಲ್ಲಿ ನೌಕರರು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದರು‌.

Related Posts

Leave a Reply

Your email address will not be published. Required fields are marked *