ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆಯನ್ನು ಬೇರೆ ಕೋರ್ಟ್‌ಗೆ ವರ್ಗಾಯಿಸುವಂತೆ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು 81ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಿಂದ ಬೇರೆ ಕೋರ್ಟ್‌ಗೆ ವರ್ಗಾಯಿಸಲು ಕೋರಿ ಪ್ರಜ್ವಲ್ ರೇವಣ್ಣ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಸಿಜೆಐ ಪೀಠ ತಿರಸ್ಕರಿಸಿದೆ. ಸಿಜೆಐ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು, ಕೆಳ ನ್ಯಾಯಾಲಯದ ಜಡ್ಜ್ ಅಭಿಪ್ರಾಯಗಳು ಪೂರ್ವಾಗ್ರಹಪೀಡಿತರಾಗಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಹೇಳಿದೆ.
ಹಾಜರುಪಡಿಸುವ ಸಾಕ್ಷ್ಯಗಳ ಆಧಾರದ ಮೇಲೆ ಜಡ್ಜ್ ತೀರ್ಪು ನೀಡಬೇಕೇ ಹೊತು ಹಿಂದಿನ ಕೇಸ್ ತೀರ್ಪು ಆಧಾರದ ಮೇಲೆ ಅಲ್ಲ ಎಂದು ಹೇಳಿ, ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಸುಪ್ರೀಂಕೋರ್ಟ್ ಆದೇಶ ಪ್ರಕಟಿಸಿದೆ.
ಜಿಲ್ಲಾ ನ್ಯಾಯಾಂಗದ ನೈತಿಕತೆಯನ್ನು ಗಮನಿಸಬೇಕಿದೆ. ಈ ವ್ಯಕ್ತಿ ಸುಪ್ರೀಂಕೋರ್ಟ್‌ಗೆ ಹೋಗಿ ಜಿಲ್ಲಾ ಕೋರ್ಟ್ ವಿರುದ್ಧ ಆದೇಶ ಪಡೆದಿದ್ದಾರೆ ಎಂಬ ಸಂದೇಶ ಕಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸಿಜೆ ಹೇಳಿದ್ದಾರೆ.
ಜನೌಷಧಿ ಕೇಂದ್ರ ಬಂದ್‌ಗೆ ತಡಯಾಜ್ಞೆ ನೀಡದ ಹೈಕೋರ್ಟ್
ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳನ್ನ ಬಂದ್ ಮಾಡುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ರಾಕೇಶ್, ಮಹಾಲಿಂಗಪ್ಪ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠವು ರಾಜ್ಯ ಸರ್ಕಾರ ಆದೇಶ ರದ್ದುಗೊಳಿಸಿದೆ.
ಜನೌಷಧಿ ಅಂಗಡಿಯವರ ಲೀಸ್ ತಿಂಗಳು ಮುಗಿದ ಹಿನ್ನೆಲೆ ಸರ್ಕಾರಿ ಆಸ್ಪತ್ರೆ ಆವರಣದಿಂದ ಹೊರಗೆ ಔಷಧಿ ಅಂಗಡಿ ಇಡಲು ಸೂಚಿಸಲಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ಜನೌಷಧಿ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಹಣ ಪಾವತಿಸಿ ಔಷಧಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ, 120 ಚದರ ಅಡಿ ಜಾಗದಲ್ಲಿ ಜನೌಷಧಿ ಇಟ್ಟು ಬಡವರಿಗೆ ಕಡಿಮೆ ಹಣದಲ್ಲಿ ಔಷಧಿ ನೀಡಿದರೆ ಏನು ಸಮಸ್ಯೆ, ಜನೌಷಧಿ ಬಗ್ಗೆ ಯಾರಾದರೂ ದೂರು ಕೊಟ್ಟಿದ್ದಾರಾ ಎಂದು ಸರ್ಕಾರವನ್ನು ತರಾಟೆಗೆ ತೆಗದುಕೊಂಡಿತು. ಜನೌಷಧಿ ಅಂಗಡಿ ಇಡಲು ಅವಕಾಶ ಕೊಡದೆ ಇದ್ದರೆ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಾಣುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದೆ.


