ನಮ್ಮ ಮೆಟ್ರೋ ನೇರಳೆ ಮಾರ್ಗದ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಭಾನುವಾರ (ಮಾರ್ಚ್ 9) ಬೆಳಗ್ಗೆ 7 ಗಂಟೆಯಿಂದ 10ಗಂಟೆಯವರೆಗೆ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
ನೇರಳೆ ಮಾರ್ಗದ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಕೈಗೊಳ್ಳಲಿದೆ. ಹೀಗಾಗಿ ಈ ನಿಲ್ಯಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ರದ್ದುಪಡಿಸಲಾಗುತ್ತದೆ ಎಂದು ನಿಗಮ ಹೇಳಿದೆ.
ಈ ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸರ್.ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳು ಮುಚ್ಚಲಾಗಿರುತ್ತದೆ. ಬೆಳಗ್ಗೆ 10 ಗಂಟೆಯವರೆಗೆ ಕ್ಯೂಆರ್ ಟಿಕೆಟ್‌ಗಳ ಖರೀದಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ನಲ್ಲಿ ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಮತ್ತು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಪ್ರಯಾಣಿಸಲು ಸಾರ್ವಜನಿಕರು ಕ್ಯೂಆರ್ ಟಿಕೆಟ್ ಹಾಗೂ ಟೋಕನ್ಗಳನ್ನು ಖರೀದಿಸದಂತೆ ಬಿಎಂಆರ್ಸಿಎಲ್ ಸೂಚಿಸಿದೆ.
ನೇರಳೆ ಮಾರ್ಗದ ಚಲ್ಲಘಟ್ಟ ಮತ್ತು ಮಾಗಡಿ ರಸ್ತೆ ನಡುವೆ, ಹಾಗೂ ಎಂಜಿ ರಸ್ತೆ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಡುವೆ, ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತವೆ. ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ರೈಲುಗಳ ಸೇವೆಗಳು ನಿಗದಿತ ಸಮಯ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.