ಬೆಂಗಳೂರಿನ ಹೆಬ್ಬಾಳದಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸದೆ ಬೈಕ್‌ನ ಹಿಂಬದಿ ಕುಳಿತಿದ್ದಕ್ಕೆ ದಂಡ ಪಾವತಿಸಿರುವ ಪ್ರಸಂಗವು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದೆ.
ಹೆಬ್ಬಾಳದ ಬಿಡಿವೈ ಕಾಲೋನಿ ಬಳಿಯ ಸಂಚಾರ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಟ್ರಾಫಿಕ್ ಪೊಲೀಸ್ ಅಧಿಕಾರಿ ಬೈಕ್‌ನ ಹಿಂಬದಿ ಕುಳಿತಿದ್ದಾಗ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಪೋಟೊ ತೆಗೆದು ಎಕ್ಸ್‌ನಲ್ಲಿ ಹೆಬ್ಬಾಳ ಟ್ರಾಫಿಕ್ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ನಿಯಮ ಎಲ್ಲರಿಗೂ ಒಂದೇ ಎಂದು ಹೇಳಿದ ಸಾರ್ವಜನಿಕರು, ಪೊಲೀಸ್ ಅಧಿಕಾರಿಗಳೇ ನಿಯಮ ಉಲ್ಲಂಘನೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದರು.
ಎಕ್ಸ್‌ನಲ್ಲಿ ಈ ಪೋಟೊ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪೊಲೀಸರೇ ನಿಯಮ ಉಲ್ಲಂಘಿಸಿದರೆ, ಸಾಮಾನ್ಯ ಜನರಿಂದ ಏನನ್ನು ನಿರೀಕ್ಷಿಸಬಹುದು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನು ಕೆಲವರು ಹೆಲ್ಮೆಟ್‌ಗಿಂತ ಕಾನೂನಿನ ದೊಡ್ಡ ರಕ್ಷಣೆ ಇದೆ ಎಂದುಕೊಂಡಿರಬಹುದು ಎಂದು ಕುಟುಕಿದ್ದಾರೆ. ಸಾರ್ವಜನಿಕರ ಒತ್ತಡಕ್ಕೆ ಮಣಿದ ಹೆಬ್ಬಾಳ ಟ್ರಾಫಿಕ್ ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು, ತಪ್ಪಿತಸ್ಥ ಅಧಿಕಾರಿಗೆ ₹500 ದಂಡ ವಿಧಿಸಿದೆ.
ಈ ಕ್ರಮವನ್ನು ಎಕ್ಸ್‌ನಲ್ಲಿ ದೃಢೀಕರಿಸಿದ ಪೊಲೀಸ್ ಇಲಾಖೆ, ನಿಯಮ ಎಲ್ಲರಿಗೂ ಸಮಾನ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ಕ್ರಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಇಲಾಖೆಯ ಸಮರ್ಪಕ ಕ್ರಮ ಎಂದು ಶ್ಲಾಘಿಸಿದರೆ, ಕೆಲವರು ಇದು ಸಾರ್ವಜನಿಕರ ಒತ್ತಡದಿಂದ ತೆಗೆದುಕೊಂಡ ಕ್ರಮ ಅಷ್ಟೇ ಎಂದು ಟೀಕಿಸಿದ್ದಾರೆ.