ಜಾಗತಿಕ ಮಾರುಕಟ್ಟೆಯಲ್ಲಿಂದು ಭಾರತವನ್ನು ಪಕ್ಕಕ್ಕೆ ಸರಿಸಿ ಯಾವ ದೇಶವೂ ಆಕ್ರಮಣಕಾರಿ ಏಕಮುಖವಾದ ಸುಂಕನೀತಿಯನ್ನು ಹೊಂದುವುದು ಕಷ್ಟ. ಒಟ್ಟಿನಲ್ಲಿ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕವಾಗಿ ಆತಂಕದಲ್ಲಿಡಬೇಕೆಂಬ ಅಮೆರಿಕದ ದೃಷ್ಟಿಕೋನವೇ ಬಾಲಿಶ.
ಅಮೆರಿಕದ ಸುಂಕ ಬೆದರಿಕೆಗೆ ಭಾರತದ ತಿರುಗೇಟು. ಯೂರೋಪಿಯನ್ ಒಕ್ಕೂಟದಿಂದ ಭಾರತಕ್ಕೆ ರವಾನೆಯಾಗುವ ಕಾರುಗಳಿಗೆ ಶೇ. ೭೦ ಸುಂಕ ಕಡಿತ. ದೊಡ್ಡಣ್ಣನ ಸುಂಕದ ಕಠಿಣ ತೀರ್ಮಾನಗಳಿಗೆ ಭಾರತದ ಇದೊಂದು ಜಾಣ ನಡೆ. ಅಷ್ಟೇ ಅಲ್ಲ.ಇದು ಅಮೆರಿಕಕ್ಕೆ ಚಾಟಿ !
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ವಿಧಿಸಿದ ಸುಂಕಗಳ ಭಾರ ಅತ್ಯಧಿಕ. ನರೇಂದ್ರ ಮೋದಿ ತನ್ನ ಮಿತ್ರ ಎಂದು ವಿದೇಶಿ ವೇದಿಕೆಗಳ ಮೇಲೆ ಟ್ರಂಪ್ ಆಡುವ ನಯ, ನಾಜೂಕು ಮಾತುಗಳ ಬೆನ್ನಹಿಂದೆಯೇ ಹಲವು ಹತ್ತು ದುಬಾರಿ ಸುಂಕ ವಿಧಿಸಿ ಸಂಕಷ್ಟಗಳನ್ನು ತಂದಿಟ್ಟ ಅಮೆರಿಕವನ್ನು ಈಗ ನಂಬಲಾಗzಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸನ್ನಿವೇಶಕ್ಕೆ ಟ್ರಂಪ್ ಅಲ್ಲದೆ ಬೇರಾರೂ ಕಾರಣರಲ್ಲ. ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸಬಾರದು. ಈ ಸಂಬಂಧ ಭಾರತ ಹಾಗೂ ರಷ್ಯಾ ನಡುವೆ ಇದುವರೆಗಿನ ಎಲ್ಲ ಬಗೆಯ ಒಪ್ಪಂದಗಳನ್ನು ಹಿಂಪಡೆಯಬೇಕೆಂಬ ಟ್ರಂಪ್ ಒತ್ತಡಕ್ಕೆ ಭಾರತವು ಸೊಪ್ಪು ಹಾಕದಿರುವುದೇ ದುಬಾರಿ ಸುಂಕ ಹೇರಿಕೆಗೆ ಕಾರಣ. ಒಂದರ್ಥದಲ್ಲಿ ಪರೋಕ್ಷವಾಗಿ ಭಾರತದ ಆರ್ಥಿಕತೆಯನ್ನು ಹಿಂದಕ್ಕೆ ಸರಿಸುವ ಅಮೆರಿಕದ ಒಳಪ್ರಯತ್ನ ಕೂಡಾ.
ಭಾರತದ ಜೊತೆ ಏಷ್ಯಾ ಖಂಡದ ಪ್ರಮುಖ ದೇಶಗಳಲ್ಲದೆ ಯೂರೋಪ್ ಮತ್ತು ಆಸ್ಟ್ರೇಲಿಯಾ ಖಂಡದ ದೇಶಗಳೂ ಉತ್ಸುಕತೆ ಹೊಂದಿವೆ. ಕೆಲವೊಂದು ತಾತ್ವಿಕ ಭಿನ್ನಭಿಪ್ರಾಯವಿದ್ದರೂ ಚೀನಾ ಕೂಡಾ ಭಾರತದ ಜೊತೆ ಉತ್ತಮ ವಾಣಿಜ್ಯಮಯ ಸಂಬಂಧವನ್ನು ಹೊಂದಲು ಬಯಸಿದೆ. ಗ್ರೀನ್‌ಲ್ಯಾಂಡ್ ಕೈವಶಪಡಿಸಿಕೊಳ್ಳುವ ವಿಚಾರದಲ್ಲಿ ಅಮೆರಿಕ ತಾಳಿದ ಕಟುನಿಲುವನ್ನು ಬ್ರಿಟನ್ ಮತ್ತು ಸೇರಿದಂತೆ ಯೂರೋಪಿಯನ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಅಲ್ಲದೆ ನ್ಯಾಟೋ ವಿಚಾರದಲ್ಲಿ ಟ್ರಂಪ್ ನೀಡಿರುವ ಹೇಳಿಕೆಯೂ ಈಗ ಯೂರೋಪಿಯನ್ ಒಕ್ಕೂಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ವಿದೇಶಿ ಕಾರುಗಳ ಆಮದು ಭಾರತಕ್ಕೆ ಅಗತ್ಯವಿದೆ. ಇದೇ ವೇಳೆ ಯೂರೋಪಿಯನ್‌ಒಕ್ಕೂಟದ ದೇಶಗಳು ಭಾರತದ ಆಮದು ಬೇಡಿಕೆಯನ್ನು ಈಡೇರಿಸಲು ಮುಂದಾಗಿರುವುದು ಗಮನಾರ್ಹ. ಒಂದಂತೂ ಸ್ಪಷ್ಟ. ಜಾಗತಿಕ ಮಾರುಕಟ್ಟೆಯಲ್ಲಿಂದು ಭಾರತವನ್ನು ಪಕ್ಕಕ್ಕೆ ಸರಿಸಿ ಯಾವ ದೇಶವೂ ಆಕ್ರಮಣಕಾರಿ ಏಕಮುಖವಾದ ಸುಂಕನೀತಿಯನ್ನು ಹೊಂದುವುದು ಕಷ್ಟ. ಒಟ್ಟಿನಲ್ಲಿ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕವಾಗಿ ಆತಂಕದಲ್ಲಿಡಬೇಕೆಂಬ ಅಮೆರಿಕದ ದೃಷ್ಟಿಕೋನವೇ ಬಾಲಿಶ.
ಯೂರೋಪಿಯನ್ ಒಕ್ಕೂಟದಿಂದ ರವಾನೆಯಾಗುವ ಕಾರುಗಳ ಸುಂಕವನ್ನು ಭಾರತವೀಗ ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸುವುದರಿಂದ, ವಿದೇಶಿ ಕಾರುಗಳ ಆಮದು ಪ್ರಮಾಣವೂ ಅಧಿಕಗೊಂಡು ಇದು ಎರಡೂ ಕಡೆಯ ವ್ಯಾಪಾರ ವೃದ್ದಿಗೆ ಪೂರಕವಾಗುತ್ತೆ. ಆರ್ಥಿಕ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸುವುದು ಭಾರತಕ್ಕೆ ಇಂದು ಹೊಸದೇನಲ್ಲ. ಕೋವಿಡ್ ಸಂಧರ್ಭದಲ್ಲಿ ಭಾರತ ತಾಳಿದ ಆತ್ಮನಿರ್ಭರ ಮತ್ತು ಕೋವಿಡ್‌ಪೂರ್ವದ ಜಾಗತೀಕರಣ ಸುಧಾರಣೆಗಳ ಸಮಯದಲ್ಲಿ ಅಂದಿನ ಸರ್ಕಾರಗಳು ಅನುಸರಿಸಿದ ಚತುರ ಆರ್ಥಿಕ ನೀತಿಗಳಿಂದ ದೇಶದ ಆರ್ಥಿಕತೆ ಸಂತೃಪ್ತಿಕರವಾಗಿಯೇ ಇದೆ. ಒಟ್ಟಿನಲ್ಲಿ ಅಮೆರಿಕವು ಈಗಲಾದರೂ ತನ್ನ ದುಬಾರಿ ಸುಂಕ ನೀತಿಯನ್ನು ಸಡಿಲಗೊಳಿಸಿ ಭಾರತದ ಜೊತೆ ಈ ದಿಶೆಯಲ್ಲಿ ಸೌಹಾರ್ದಯುತ ಸಂಬಂಧಗಳಿಗೆ ಮುಂದಾಗುವುದು ಲೇಸು.


