ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸೃಷ್ಟಿಯ ಸೊಬಗು ಪ್ರೀತಿಯ ಸೆಳೆತದಂತೆ ಆಕರ್ಷಿಸುತ್ತದೆ. ಆ ಆಕರ್ಷಣೆಯನ್ನು ಪದಗಳಲ್ಲಿ ಹಿಡಿದಿಡಲಾಗದಷ್ಟು ಮನುಷ್ಯ ಅಸಹಾಯಕನಾಗುತ್ತಾನೆ. ಪ್ರಕೃತಿ ಮಾತೆಯ ಒಲವ ರೂಪ ಒಮ್ಮೆ ನೋಡಿ ಮರೆತುಬಿಡುವಂಥದ್ದಲ್ಲ. ಯುಗದ ದೀಪದಂತೆ ಹಾಡಿ, ಕೊಂಡಾಡುತ್ತಲೇ ಇರಬೇಕೆನ್ನಿಸುವಷ್ಟು. ಅವಳ ಸೃಷ್ಟಿ, ಸೌಂದರ್ಯವನ್ನು ಅಕ್ಷರಗಳಲ್ಲಿ ಸೆರೆಹಿಡಿದು ಅಮರವಾಗಿಸಬೇಕು ಎನ್ನುವ ತವಕ…
ಒಮ್ಮೆ ನೋಡಿದ ಮೇಲೆ
ಒಮ್ಮೆ ನೋಡಿದ ಮೇಲೆ ಮತ್ತೆ ನೋಡಬೇಕು;
ಅದು ನಿನ್ನ ಪ್ರೀತಿ!
ಎಷ್ಟು ಬರೆದರು ಮತ್ತಷ್ಟು ಬರೆಯುತ್ತಿರಬೇಕು;
ಇದು ನಿನ್ನ ರೀತಿ!
ನೋಡಿ ಮರೆವ ಮಿಂಚಿನ ಸಂಚಲ್ಲ ಕಣ್ಣೋಟ;
ಅದು ಒಲವ ರೂಪ!
ಹಾಡಿ ಹೊರಡುವ ಸನ್ನಾಹವಲ್ಲ ನನ್ನ ನೋಟ;
ಅದು ಯುಗದ ದೀಪ!
ನಿನ್ನ ಸೌಂದರ್ಯ ಸೊಬಗೆಲ್ಲ ಹೊಳೆಯಬೇಕು;
ಅದು ನಿನ್ನ ಸೃಷ್ಟಿ!
ನನ್ನ ಲೇಖನಿ ಬೆಳಕಲ್ಲಿ ನೀ ಅಮರವಾಗಬೇಕು;
ಇದು ನನ್ನ ದೃಷ್ಟಿ!
ಬೇಗೆಯಲ್ಲಿ ಮಳೆಯ ನಂತರ ತಂಪು ನಿಸರ್ಗ;
ಅದು ನಿನ್ನ ನಡಿಗೆ!
ಹನಿಹನಿಗೆ ಮೈಯೊಡ್ಡಿ ನಿನ್ನ ನೆನೆಯುವ ಸ್ವರ್ಗ;
ಇದು ಜನ್ಮದ ಬೆಸುಗೆ!
ಕಾನನದ ಗೂಢತೆಯಲ್ಲಿ ಹರಿವ ತೊರೆ ನಿನಾದ;
ಅದು ನಿನ್ನ ಇಂಚರ!
ಹಂಬಲಿಸಿ ಬರುವೆ ನಿನ್ನೊಡನೆ ಬೆರೆವ ಆಹ್ಲಾದ;
ಇದು ಪ್ರೀತಿ ಬಂಧುರ!
ತಾರೆಗಳ ರಾಶಿಯಲ್ಲಿಯೆ ಪ್ರಜ್ವಲಿಸುವ ಧೃವತಾರೆ;
ಅದು ನಿನ್ನ ಪ್ರತಿಭೆ!
ನಿನ್ನ ಸೇರುವುದೆ ಅಂತಿಮ ನನ್ನೆದೆಯ ಜೀವಧಾರೆ!
ಇದು ಹೃದಯ ಪ್ರಭೆ!
ಕೋಟಿ ಹೃದಯಗಳಲ್ಲಿ ನನ್ನೆಡೆಗೆ ಮಿಡಿವ ಮನವೆ;
ಅದು ನಿನ್ನ ಹೆಸರು!
ಎಲ್ಲ ಜನ್ಮಗಳಲ್ಲಿ ನಿನಗಾಗಿ ಮೀಸಲು ಇಹಪರವೆ;
ಇದು ನನ್ನ ಉಸಿರು!
– ಟಿ. ಪಿ. ಉಮೇಶ್
ಆನಂದಮಯ ಈ ಜಗ ಹೃದಯ/ಏತಕೆ ಭಯ ಮಾಣೊ/ಸೂರ್ಯೋದಯ ಚಂದ್ರೋದಯ/ ದೇವರ ದಯೆ ಕಾಣೊ ಎಂದು ಕುವೆಂಪು ಈ ನಿಸರ್ಗದ ಚೆಲುವನ್ನು ತನ್ಮಯರಾಗಿ ಬಣ್ಣಿಸಿದ್ದಾರೆ. ಹೌದು, ಈ ಸೃಷ್ಟಿಯ ಸೊಬಗು ಅನನ್ಯ, ನಿತ್ಯ ನೂತನ. ನೋಡಲೆರಡು ಕಣ್ಣು ಸಾಲದೆಂಬಂತೆ ನೆಲದ ಸೌಂದರ್ಯದ ಗಣಿಯನ್ನು ವೀಕ್ಷಿಸಲು, ವರ್ಣಿಸಲು ಒಂದು ಜನ್ಮ ಸಾಲದೇನೋ ಎಂದೆನಿಸುತ್ತದೆ. ಪ್ರತಿ ಋತುವಿನಲ್ಲೂ ವಿಭಿನ್ನವಾಗಿ ಗೋಚರಿಸುವ ಸೃಷ್ಟಿ ಎಷ್ಟು ಕಣ್ದುಂಬಿ ಕೊಂಡರೂ ನಿಗೂಢವೆನಿಸುತ್ತಲೇ ಹೋಗುವ ಪರಿ ಸೋಜಿಗವೆನಿಸುತ್ತದೆ. ಹುಟ್ಟಿನಿಂದ ಸಾಯುವವರೆಗೂ ನಿಸರ್ಗದ ಮಡಿಲಲ್ಲಿಯೇ ಬದುಕನ್ನು ಕಳೆಯುವ ಮನುಷ್ಯ, ಎಷ್ಟೇ ಸಾಧಿಸಿದರೂ ಈ ಪ್ರಕೃತಿ ಮಾತೆಯ ಮುಂದೆ ಹಸುಳೆಯಂತೆ. ಅಂತಹ ಅಗಾಧ ನಿಸರ್ಗದ ಸೊಬಗನ್ನು ಕವಿತೆಯಲ್ಲಿ ಸೆರೆ ಹಿಡಿಯುವ ಕವಿ ಟಿ.ಪಿ.ಉಮೇಶ್, ನೆಲ, ಜಲ, ಮಳೆ, ಬಿಸಿಲು, ತಾರೆಗಳ ಅಂದ ಚೆಂದಕ್ಕೆ ಮನಸೋಲುತ್ತಾ, ಅದರೆಡೆಗೆ ಪ್ರೀತಿ ಹನಿಸುತ್ತಾ, ತನ್ನ ಉಸಿರನ್ನೇ ಮೀಸಲಿಡುವ ಪರಿ ಇಷ್ಟವಾಗುತ್ತದೆ.
ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸೃಷ್ಟಿಯ ಸೊಬಗು ಪ್ರೀತಿಯ ಸೆಳೆತದಂತೆ ಆಕರ್ಷಿಸುತ್ತದೆ. ಆ ಆಕರ್ಷಣೆಯನ್ನು ಪದಗಳಲ್ಲಿ ಹಿಡಿದಿಡಲಾಗದಷ್ಟು ಮನುಷ್ಯ ಅಸಹಾಯಕನಾಗುತ್ತಾನೆ. ಪ್ರಕೃತಿ ಮಾತೆಯ ಒಲವ ರೂಪ ಒಮ್ಮೆ ನೋಡಿ ಮರೆತುಬಿಡುವಂಥದ್ದಲ್ಲ. ಯುಗದ ದೀಪದಂತೆ ಹಾಡಿ, ಕೊಂಡಾಡುತ್ತಲೇ ಇರಬೇಕೆನ್ನಿಸುವಷ್ಟು. ಅವಳ ಸೃಷ್ಟಿ, ಸೌಂದರ್ಯವನ್ನು ಅಕ್ಷರಗಳಲ್ಲಿ ಸೆರೆ ಹಿಡಿದು ಅಮರವಾಗಿಸಬೇಕು ಎನ್ನುವ ತವಕ. ಕಾಲಮಾನಗಳು ಉರುಳುತ್ತಲೇ ಬಿಸಿಲು, ಮಳೆ, ಚಳಿಯ ಬದಲಾವಣೆ ಸೃಷ್ಟಿಯ ಬಿಡುವಿಲ್ಲದ ನಿರಂತರ ನಡಿಗೆ. ಬೀಳ್ವ ತುಂತುರು ಮಳೆ ಹನಿಗೆ ಮೈಯೊಡ್ಡುವ ಸುಖ ಅದ್ಯಾವ ಜನ್ಮದ ಋಣಾನುಬಂಧವೋ ಏನೋ ಎನ್ನಿಸುವಷ್ಟು. ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ಸಣ್ಣ ತೊರೆಯ ನಿನಾದ ಇಂಚರದಂತೆ. ಕಾಣದ ಕಡಲನ್ನು ಅರಸಿ ಹೊರಟ ನದಿಯಂತೆ ಹಂಬಲಿಸಿ ಆಕೆಯ ಸಾಂಗತ್ಯಕ್ಕೆ ಹಾತೊರೆವ ಜೀವಪ್ರೀತಿ. ತುಂಬು ತಾರೆಗಳ ಮಧ್ಯೆ ಹೊಳೆ ಹೊಳೆವ ಧೃವತಾರೆ ಈ ಅವನಿ. ಎಲ್ಲ ಜೀವಗಳ ಅಂತಿಮ ನಿಲ್ದಾಣ ಅವಳ ಮಡಿಲೇ. ಈ ಭುವಿಯಲ್ಲಿ ಜೀವತಳೆದ ಪ್ರತಿ ಜೀವಿಯ ಮಿಡಿತವೇ ಈ ಸೃಷ್ಟಿಯ ಹೆಸರು. ಅದರ ಉಳಿವಿಗಾಗಿಯೇ ಮೀಸಲು ನಮ್ಮೆಲ್ಲರ ಉಸಿರು.
ನಿಸರ್ಗವನ್ನು ತುಂಬು ಪ್ರೀತಿಯಿಂದ ಜೀವ ಧ್ಯಾನದಂತೆ ಆರಾಧಿಸುವ ಈ ಕವಿತೆ, ಸೃಷ್ಟಿ ಸೊಬಗಿನಲ್ಲಿಯೇ ಕಳೆದು ಹೋಗುವಂತೆ ಮಾಡುತ್ತದೆ. ಕವಿಗೆ ಧನ್ಯವಾದಗಳು.
ಕವಿ ಪರಿಚಯ: ಟಿ.ಪಿ.ಉಮೇಶ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕರೆ ತಾಲೂಕಿನ ತೊಡರನಾಳ ದವರು. ಸದ್ಯಕ್ಕೆ ಅದೇ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಕಥೆ, ಕವಿತೆ, ಲೇಖನ, ಅಂಕಣಗಳನ್ನು ಬರೆಯುತ್ತಿದ್ದಾರೆ. ಅವಧಿ, ಕೆಂಡ ಸಂಪಿಗೆ, ತರಂಗ, ಸುಧಾ, ಮಲ್ಲಿಗೆ, ಕಸ್ತೂರಿ, ಮಯೂರ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟ ಗೊಂಡಿವೆ. ಆಕಾಶವಾಣಿ ಬೆಂಗಳೂರು, ಚಿತ್ರದುರ್ಗ ಕೆಂದ್ರದಿಂದ ಕಥೆ, ಕವಿತೆಗಳು ಪ್ರಸಾರವಾಗಿವೆ. ತಾಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚನ ಮಾಡಿದ್ದಾರೆ. ಫೋಟೋಕ್ಕೊಂದು ಫ್ರೇಮು, ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್, ವಚನಾಂಜಲಿ, ದೇವರಿಗೆ ಬೀಗ, ಅಪ್ಪನು ಕೊಡಿಸಿದ ಮೊದಲ ಪುಸ್ತಕ, ಗಂಡಸಾಗಿ ಕವಿತೆ ಬರೆಯುವುದು ಸುಲಭ, ಅಳಿಗೊಂಡಿಹರೆಂದು ಅಂಜಲದೇಕೆ? ಎಂಬ ಸಂಕಲನಗಳನ್ನು ಪ್ರಕಟಿಸಿ ದ್ದಾರೆ. ಇವರಿಗೆ ತಾಲೂಕು, ಜಿಲ್ಲಾ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಅತ್ಯುತ್ತಮ ಶಿಕ್ಷಕ ರಾಷ್ಟ್ರಪತಿ ಪುರಸ್ಕಾರ ಗಳು ಲಭಿಸಿವೆ.