ಬೆಂಗಳೂರಿನ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುವ ಚಾಳಿ ಹೊಂದಿರುವವರು ಇನ್ನು ಮುಂದೆ ಹತ್ತು ಬಾರಿ ಯೋಚಿಸಲೇಬೇಕಿದೆ. ಏಕೆಂದರೆ ಸ್ಥಗಿತಗೊಂಡಿದ್ದ ಟೋಯಿಂಗ್ ಮತ್ತೆ ಚಾಲ್ತಿಗೆ ಬರುತ್ತಿದ್ದು, ದರ ಶೇ ನೂರರಷ್ಟು ಏರಿಕೆಯಾಗಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಟೋಯಿಂಗ್ ದರಗಳನ್ನು ಅಧಿಕೃತಗೊಳಿಸಿದ್ದು, ವಾಹನ ಸವಾರರನ್ನು ಬೆಚ್ಚಿ ಬೀಳಿಸಿದೆ. ದ್ವಿಚಕ್ರ ವಾಹನವನ್ನು ‘ನೋ ಪಾರ್ಕಿಂಗ್’ ವಲಯದಲ್ಲಿ ನಿಲ್ಲಿಸಿ ಟೋಯಿಂಗ್ ಆದಲ್ಲಿ 650ರೂ. ದಂಡ ತೆರಬೇಕಾಗುತ್ತದೆ. ಕಾರು ಟೋಯಿಂಗ್ ಆದಲ್ಲಿ ಜೇಬಿನಿಂದ 1,000 ರೂ. ತೆರಬೇಕು. ಈ ಟೋಯಿಂಗ್ ಚಾರ್ಜ್‌ಗಳು ಸಂಚಾರಿ ಪೊಲೀಸರು ವಿಧಿಸುವ ಸಾಮಾನ್ಯ ಪಾರ್ಕಿಂಗ್ ದಂಡದ ಹೊರತಾಗಿ ಇರಲಿವೆ.
ಖಾಸಗಿ ಆಪರೇಟರ್‌ಗಳ ಕಿರುಕುಳದಿಂದಾಗಿ ಸರ್ಕಾರ ಟೋಯಿಂಗ್‌ಗೆ ಬ್ರೇಕ್ ಹಾಕಿತ್ತು. ಈಗ ಜಿಬಿಎ ಹೊಸ ನಿಯಮ ಜಾರಿಗೆ ತಂದಿದ್ದು, ಖಾಸಗಿ ಏಜೆನ್ಸಿಗಳಿಗೆ ಪ್ರತಿ ವಾಹನದ ಬದಲಾಗಿ ಮಾಸಿಕ ವೇತನ ನೀಡಲು ನಿರ್ಧರಿಸಿದೆ. ಇದರಿಂದ ಅನಗತ್ಯವಾಗಿ ವಾಹನಗಳನ್ನು ಎತ್ತುವ ಕಿರಿಕಿರಿ ತಪ್ಪಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ನಗರದ ಐದು ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ತಲಾ ಎರಡು ಟೋಯಿಂಗ್ ವಾಹನಗಳು ಕಾರ್ಯಾಚರಣೆ ಆರಂಭಿಸಲಿದ್ದು, ರಸ್ತೆ ಬದಿ ಅಡ್ಡಾದಿಡ್ಡಿ ನಿಲ್ಲಿಸುವ ಹಾಗೂ ಕೈಬಿಡಲಾದ ವಾಹನಗಳನ್ನು ತೆರವುಗೊಳಿಸಲು ಪೊಲೀಸರು ಸಜ್ಜಾಗಿದ್ದಾರೆ.
ಈ ಹಿಂದೆ ಟೋಯಿಂಗ್ ದರ 300 ರೂ. ಇತ್ತು, ಶೇ. 116ರಷ್ಟು ಏರಿಕೆಯಾಗಿದೆ. ಕಾರಿಗೆ 500 ರೂ. ಇದ್ದ ಟೋಯಿಂಗ್ ದರ ಈಗ 1,000 ರೂಪಾಯಿ ಆಗಿದೆ. ನೂರಕ್ಕೆ ನೂರರಷ್ಟು ದರ ಹೆಚ್ಚಳವಾಗಿದೆ. ಈ ಟೋಯಿಂಗ್ ಚಾರ್ಜ್‌ಗಳು ಸಂಚಾರಿ ಪೊಲೀಸರು ವಿಧಿಸುವ ಸಾಮಾನ್ಯ ಪಾರ್ಕಿಂಗ್ ದಂಡದ ಹೊರತಾಗಿ ಇರಲಿವೆ.


