ಮಾಘ ಹುಣ್ಣಿಮೆ ದಿನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.
45 ದಿನಗಳ ಕಾಲ ನಡೆಯುವ ಕುಂಭಮೇಳದಲ್ಲಿ ಈಗಾಗಲೇ 46 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಇತ್ತೀಚೆಗಷ್ಟೇ ಅಮೃತ ಸ್ನಾನ ಮುಗಿದಿದ್ದು, ಇದೀಗ ಮಾಘ ಹುಣ್ಣಿಮೆ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.
ಈಗಾಗಲೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ತಲುಪುವ 6 ಮಾರ್ಗಗಳಲ್ಲಿ ವಾಹನಗಳ ದಟ್ಟಣೆ ಉಂಟಾಗಿದ್ದು, ಒಟ್ಟಾರೆ 6 ರಸ್ತೆಗಳೂ ಸೇರಿ 300 ಕಿ.ಮೀ. ಉದ್ದದಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರತಿ ರಸ್ತೆಯಲ್ಲೂ 25ರಿಂದ 50 ಕಿ.ಮೀ.ನಷ್ಟು ದೂರ ವಾಹನಗಳು ನಿಂತಿವೆ ಎಂದು ವರದಿಗಳು ಹೇಳಿವೆ.
ಪ್ರತಿ 50 ಕಿ.ಮೀ. ದೂರ ಸಾಗಲು 10ರಿಂದ 12 ಗಂಟೆ ಸಮಯ ಬೇಕಾಗುತ್ತದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಪ್ರಯಾಗ್ ರಾಜ್ ಕಡೆ ಹೋಗುವ ವಾಹನಗಳನ್ನು ಮಧ್ಯಪ್ರದೇಶದ ಪೊಲೀಸರು ವಾಪಸ್ ಹೋಗುವಂತೆ ಮನವಿ ಮಾಡುತ್ತಿದ್ದಾರೆ.
ಪ್ರಯಾಗ್ ರಾಜ್-ವರಣಾಸಿ ನಡುವಿನ ಬಧೋನಿ ಮಾರ್ಗದಲ್ಲಿ ಯಾವುದೇ ಟ್ರಾಫಿಕ್ ಜಾಮ್ ಸಂಭವಿಸಿಲ್ಲ.
ಕಳೆದ ಮೂರು ದಿನಗಳಿಂದ ಪ್ರಯಾಗ್ ರಾಜ್ ಕಡೆ ಪ್ರತಿ ದಿನ ಸುಮಾರು 50 ಸಾವಿರ ವಾಹನಗಳು ಆಗಮಿಸುತ್ತಿವೆ ಎಂದು ವರದಿಗಳು ಹೇಳಿವೆ. ರಾಷ್ಟ್ರೀಯ ಹೆದ್ದಾರಿ 19ರಲ್ಲಿ ಟೋಲ್ ಬಳಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ನಿಲುಗಡೆ ಆಗಿದ್ದು, ಕೊನೆಗೆ ಟೋಲ್ ಉಚಿತ ಮಾಡಿ ವಾಹನಗಳಿಗೆ ಸರಾಗವಾಗಿ ಸಾಗಲು ಅನುವು ಮಾಡಿಕೊಟ್ಟ ನಂತರ ಸ್ವಲ್ಪ ಪ್ರಮಾಣದಲ್ಲಿ ವಾಹನ ದಟ್ಟಣೆ ಕಡಿಮೆ ಆಗಿದೆ ಎಂದು ವರದಿಗಳು ಹೇಳಿವೆ.
ಸೋಮವಾರ ರಾತ್ರಿ 12 ಗಂಟೆಯಿಂದ ಮಂಗಳವಾರ 10 ಗಂಟೆಯವರೆಗೆ ಸುಮಾರು 20 ಸಾವಿರ ವಾಹನಗಳು ಟೋಲ್ ದಾಟಿವೆ. ಮಾಘ ಸ್ನಾನದ ಪ್ರಯುಕ್ತ ಮಂಗಳವಾರ ಸಂಜೆ ನಂತರ ಹಾಗೂ ಬುಧವಾರ ವಾಹನಗಳ ಸಂಖ್ಯೆ ದುಪ್ಪಟ್ಟು ಆಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಘ ಸ್ನಾನದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಹೆಚ್ಚುವರಿ 24 ರೈಲುಗಳನ್ನು ಪ್ರಯಾಗ್ ರಾಜ್ ಗೆ ಬಿಟ್ಟಿದೆ. ಆದರೆ ರೈಲುಗಳು ತುಂಬಿದ್ದರೂ ಹೆಚ್ಚುವರಿ ರೈಲುಗಳ ಸೇವೆ ದೊರೆಯದೇ ಪ್ರಯಾಣಿಕರು ರೈಲುಗಳ ಬಾಗಿಲು, ಕಿಟಕಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆಗಳು ವರದಿಯಾಗುತ್ತಿವೆ.