Saturday, February 22, 2025
Menu

ತಿರುಪತಿ ಲಡ್ಡು ಕಲಬೆರಕೆ: ನಾಲ್ವರನ್ನು ಬಂಧಿಸಿದ ಸಿಬಿಐ

ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ತಿರುಪತಿ ತಿಮ್ಮಪ್ಪನ ದೇಗುಲದ ಲಡ್ಡು ಪ್ರಸಾದಲ್ಲಿ ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉತ್ತರಾಖಂಡ್‌ ರೂರ್ಕಿಯ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕ ವಿಪಿನ್ ಜೈನ್, ಪೊಮಿಲ್ ಜೈನ್, ಪೂನಂಬಾಕ್ಕಂನ ವೈಷ್ಣವಿ ಡೈರಿ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ, ದುಂಡಿಗಲ್‌ನ ಎಆರ್ ಡೈರಿ ಎಂಡಿ ರಾಜಶೇಖರನ್ ಬಂಧಿತ ಆರೋಪಿಗಳು.

ಟೆಂಡರ್ ಪಡೆಯುವ ಹಂತದಿಂದ ಪೂರೈಕೆ ತನಕ ನಿಯಮ ಉಲ್ಲಂಘಿಸಿದ ಆರೋಪದಡಿ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳು ತುಪ್ಪ ಪೂರೈಕೆಯಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ದೃಢಪಟ್ಟಿದೆ. ವೈಷ್ಣವಿ ಡೈರಿ ಮುಂದೆ ಎಆರ್ ಡೈರಿ ಹೆಸರಿರುವ ಸುಳ್ಳು ದಾಖಲೆಗಳು ಮತ್ತು ಸೀಲುಗಳನ್ನು ಬಳಸಿ ಟೆಂಡರ್ ಪಡೆದಿರುವುದು ಬೆಳಕಿಗೆ ಬಂದಿದೆ. ತುಪ್ಪದ ಟೆಂಡರ್ ಪಡೆಯಲು ನಕಲಿ ದಾಖಲೆಗಳು, ಸೀಲ್ ಬಳಕೆ ಮಾಡಿದ್ದಾರೆ. ದಾಖಲೆಗಳನ್ನು ತಿರುಚಿರುವುದು ಮಾತ್ರವಲ್ಲದೆ ತುಪ್ಪ ಪೂರೈಕೆಯಲ್ಲಿಯೂ ವ್ಯತ್ಯಾಸ ನಡೆದಿರುವ ಕಾರಣಕ್ಕೆ ಸಿಬಿಐ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

ಲಡ್ಡು ಪ್ರಸಾದ ತಯಾರಿಯಲ್ಲಿ ಕಲಬೆರಕೆ ತುಪ್ಪ ವಿವಾದದ ಬಳಿಕ ಟಿಟಿಡಿಯು ಕರ್ನಾಟಕದ ಕೆಎಂಎಫ್‌ನಿಂದ ತುಪ್ಪ ಮರುಖರೀದಿಗೆ ಮುಂದಾಗಿತ್ತು.
ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಮಿಶ್ರಣ ಮಾಡಲಾಗಿದೆ ಎಂಬ ವಿಚಾರ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹಿಂದೂ ಧರ್ಮೀಯರ ನಂಬಿಕೆಗೆ ಅಪಮಾನ ಮಾಡಲಾಗಿದೆ ಎಂದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಿರುಮಲದಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಲಡ್ಡುವಿನಲ್ಲಿ ಹಸುವಿನ ಕೊಬ್ಬು ಮತ್ತು ಪ್ರಾಣಿಗಳ ತ್ಯಾಜ್ಯ ಮಿಶ್ರಣ ಮಾಡಲಾಗಿದೆ ಎಂದು ಚಂದ್ರಬಾಬು ನಾಯ್ಡು ಸರ್ಕಾರ ಆರೋಪಿಸಿತ್ತು. ಅವರು ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ತಿರುಮಲ ಲಡ್ಡುವಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಹೇಳಿದ್ದರು.

Related Posts

Leave a Reply

Your email address will not be published. Required fields are marked *