ತಿರುಪತಿಯಲ್ಲಿರುವ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾದ ರಾತ್ರಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ದೇಗುಲದ ರಾಜಗೋಪುರವನ್ನು ಏರಿ ಆತಂಕ ಸೃಷ್ಟಿಸಿದ್ದಾನೆ. ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಒಳನುಗ್ಗಿದ್ದ ವ್ಯಕ್ತಿ ಗೋಪುರದ ಮೇಲಿದ್ದ ಕಳಶಗಳಿಗೆ ಹಾನಿ ಮಾಡಿದ್ದಲ್ಲದೆ, ತನಗೆ ಮದ್ಯ ತಂದುಕೊಟ್ಟರೆ ಮಾತ್ರ ಕೆಳಗೆ ಇಳಿಯುವುದಾಗಿ ಪಟ್ಟು ಹಿಡಿದಿದ್ದ.
ವಿಷಯ ತಿಳಿದು ಸ್ಥಳಕ್ಕೆ ಬಂದ ತಿರುಪತಿ ಪೂರ್ವ ವಿಭಾಗದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ವ್ಯಕ್ತಿಯನ್ನು ಕೆಳಗೆ ಇಳಿಯುವಂತೆ ಮನವೊಲಿಸಲು ಯತ್ನಿಸಿದಾಗ, ಕುಡಿಯಲು ಮದ್ಯ ನೀಡಿದರೆ ಮಾತ್ರ ಕೆಳಗೆ ಬರುತ್ತೇನೆ, ಇಲ್ಲದಿದ್ದರೆ ಇಲ್ಲೇ ಇರುತ್ತೇನೆ ಎಂದು ಕೂಗಾಡಿದ್ದ. ಮೂರು ಗಂಟೆ ಪ್ರಯತ್ನದ ಬಳಿಕ ಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಏಣಿ ಮೂಲಕ ಗೋಪುರವನ್ನು ಏರಿ ಹಗ್ಗದ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಕೆಳಗೆ ಕರೆತಂದಿದ್ದಾರೆ.
ಬಂಧಿತ ವ್ಯಕ್ತಿಯನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾ ನಿವಾಸಿ ಕುಟ್ಟಾಡಿ ತಿರುಪತಿ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ತಾನು ಮದ್ಯ ಸೇವಿಸಿ ಅಮಲಿನಲ್ಲಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅತಿಸೂಕ್ಷ್ಮ ವಲಯದಲ್ಲಿ ಭದ್ರತಾ ಲೋಪ ಉಂಟಾಗಿದ್ದು ಹೇಗೆ ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿರುಪತಿ ಪೂರ್ವ ಡಿವೈಎಸ್‌ಪಿ ಭಕ್ತವತ್ಸಲಂ ತಿಳಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಕಳಶಗಳಿಗೆ ಆಗಿರುವ ಹಾನಿಯ ಬಗ್ಗೆ ದೇಗುಲದ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.


