ಟಿಪ್ಪರ್ ಲಾರಿ, ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ವಿದ್ಯಾರ್ಥಿಗಳು ಸೇರಿದಂತೆ 9 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಉಡುಪಿಯ ತಲ್ಲೂರು ನೇರಳಕಟ್ಟೆಯ ಶೇಟ್ಟರಕಟ್ಟೆ ತಿರುವಿನ ಹಾಜರಿ ಬಳಿ ನಡೆದಿದೆ.
ನೇರಳಕಟ್ಟೆಯಿಂದ ತಲ್ಲೂರು ಕಡೆಗೆ ಬರುತ್ತಿದ್ದ ಕೇರಳ ನೋಂದಣಿಯ ಟಿಪ್ಪರ್ ಚಾಲಕನ ಅಜಾಗರೂಕತೆಯಿಂದಲೇ ಈ ಘಟನೆ ನಡೆದಿದ್ದು, ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಬಲ ಬದಿ ಸಂಪೂರ್ಣ ಜಖಂಗೊಂಡಿದ್ದು, ಬಸ್ ನಲ್ಲಿ 39 ಮಂದಿ ಪ್ರಯಾಣಿಸುತ್ತಿದ್ದು, 9 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವರಿಗೆ ಸಣ್ಣ, ಪುಟ್ಟ ಗಾಯಗಳಾಗಿದ್ದು ಅವರಿಗೂ ಕೂಡ ಚಿಕಿತ್ಸೆ ನೀಡಲಾಗುತ್ತಿದೆ. ಟಿಪ್ಪರ್ ಚಾಲಕ ಘಟನಾ ಸ್ಥಳದಿಂದ ಪರಾರಿ ಆಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಂದಾಪುರ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಘಟನೆಯಲ್ಲಿ 9 ಮಂದಿಗೆ ಗಾಯಗಳಾಗಿದ್ದು, ಕೇರಳ ನೋಂದಣಿಯ ಟಿಪ್ಪರ್ ಏಕಾಏಕಿ ಬಸ್ ಗೆ ಬಂದು ಡಿಕ್ಕಿ ಹೊಡೆದಿದೆ. ವಾಹನದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾಗ ಫಿಟ್ ನೆಸ್ ಪ್ರಮಾಣ ಪತ್ರ ಸೇರಿದಂತೆ ಯಾವುದೇ ದಾಖಲೆಗಳು ಸರಿಯಾಗಿ ಇಲ್ಲ. ಚಾಲಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪ್ರಯಾಣಿಕರನ್ನು ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರು ಸೇರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಗಾಯಗೊಂಡ ಎಲ್ಲ ಪ್ರಯಾಣಿಕರ ಆಸ್ಪತ್ರೆಯ ವೆಚ್ಚಗಳನ್ನು ಭರಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸೂಚನೆ ನೀಡಿದ್ದು, ಅವರ ಆದೇಶದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗಾಯಗಳುಗಳ ವೆಚ್ಚವನ್ನು ಕೆಎಸ್ ಆರ್ ಟಿಸಿಯೇ ನೋಡಿಕೊಳ್ಳಲಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.


