ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಸಿಮೆಂಟ್ ಸಾಗಿಸಿತ್ತಿದ್ದ ಟಿಪ್ಪರ್ ಕಾರಿನ ಮೇಲೆ ಮಗುಚಿ ಬಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ.
ಮೇಘನಗರದ ಶಿವಗಢ ಮಹುದಾ ಗ್ರಾಮದ ನಿವಾಸಿಗಳಾದ ಮುಖೇಶ್, ಸಾವ್ಲಿ , ವಿನೋದ್, ಪಾಯಲ್ , ಮಾಧಿ, ವಿಜಯ್ ಭರು ಬಮಾನಿಯಾ , ಕಾಂತಾ , ರಾಗಿಣಿ ಮತ್ತು ಅಕಾಲಿ (35) ಮೃತಪಟ್ಟವರು. ಪಾಯಲ್ ಸೋಮ್ಲಾ (19) ಮತ್ತು ಆಶು (5) ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಘನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೆಲಿ ರೈಲು ನಿಲ್ದಾಣದ ಬಳಿ ನಸುಕಿನ ಜಾವ ಈ ಅಪಘಾತ ಸಂಭವಿಸಿದೆ. ಕುಟುಂಬವು ಮದುವೆ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಸಂಜೆಲಿ ರೈಲ್ವೆ ಕ್ರಾಸಿಂಗ್ ಬಳಿ ತಾತ್ಕಾಲಿಕ ರಸ್ತೆಯ ಮೂಲಕ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಡೆ ತಿರುಗುತ್ತಿದ್ದಾಗ ಟಿಪ್ಪರ್ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಮೇಘ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.