“ವಿಜಯೇಂದ್ರ ಅವರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡೋಣ. ಉತ್ತರಕ್ಕೆ ಸಮಯ ಬರುತ್ತದೆ, ಕಾಲವೇ ಉತ್ತರ ನೀಡುತ್ತದೆ. ಅವರಿಗೆ ಏನು ಬೇಕೋ ಆ ಉತ್ತರ ಈಗಾಗಲೇ ನೀಡಿದ್ದೇನೆ. ಹೈಕಮಾಂಡ್ ಗೆ ನಾವು ಎಟಿಎಂ ಎಂದು ವಿಜಯೇಂದ್ರ ಹೇಳಿದ್ದಾರೆ. ಇದನ್ನು ಅವರು ಸಾಬೀತು ಮಾಡಬೇಕು. ಯಾವ ಲೆಕ್ಕಾಚಾರದ ಮೇಲೆ ಅವರು ಆರೋಪ ಮಾಡಿದ್ದಾರೆ ಎಂದು ಹೇಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ನಿಮ್ಮನ್ನು ಭ್ರಷ್ಟಾಚಾರದ ಪಿತಾಮಹ ಎಂದು ವಿಜಯೇಂದ್ರ ಕರೆದಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಇಲ್ಲಿ ಸರಕಾರವನ್ನು ನಾವು ದಿವಾಳಿ ಮಾಡಿ ದುಡ್ಡು ತೆಗೆದುಕೊಂಡು ಹೋಗಿ ಹೈಕಮಾಂಡ್ ಗೆ ಕೊಡುತ್ತಿದ್ದೇವೆ, ನಾವು ಹೈ ಕಮಾಂಡ್ ಗೆ ಎಟಿಎಂ ಎಂದು ವಿಜಯೇಂದ್ರ ಹೇಳಿದ್ದಾರೆ. ಈಗ ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಉಳಿದ ಉತ್ತರಕ್ಕೆ ಸಮಯ ಬರುತ್ತದೆ, ಕಾಲವೇ ಉತ್ತರ ನೀಡುತ್ತದೆ. ಅವರಿಗೆ ಏನು ಬೇಕೋ ಆ ಉತ್ತರ ಈಗಾಗಲೇ ನೀಡಿದ್ದೇನೆ ಎಂದು ಶಿವಕುಮಾರ್ ಉತ್ತರಿಸಿದರು.
ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್ ನಡೆದರೆ ತಪ್ಪೇನು?
“ಒಟ್ಟಿಗೆ ಸೇರಿ ಊಟ ಮಾಡುವುದನ್ನು ಬೇಡ ಎಂದು ಹೇಳಲು ಆಗುತ್ತದೆಯೇ? ನನಗೇಕೆ ಅದೆಲ್ಲಾ? ಹೊರಗಡೆಯಿಂದ ಬಂದಿದ್ದೀವಿ. ಎಲ್ಲಾ ಸೇರಿರೋದ್ರಲ್ಲಿ, ಊಟ ಮಾಡೋದ್ರಲ್ಲಿ ತಪ್ಪೇನಿದೆ?” ಎಂದು ಶಿವಕುಮಾರ್ ಮರುಪ್ರಶ್ನಿಸಿದ್ದಾರೆ. ಎಲ್ಲ ಸೇರಿ ಊಟ ಮಾಡೋದ್ರಲ್ಲಿ ತಪ್ಪು ಹುಡುಕಬೇಡಿ ಎಂದರು. ಅಲ್ಲಿ ಬರೀ ನಾಲ್ಕೈದು ಜನ ಸೇರಿದ್ರಂತೆ ಎಂದು ಮಾಧ್ಯಮದವರು ಕೇಳಿದಾಗ, “ಅದು ನನಗ್ಯಾಕೆ ಬೇಕು. ನನ್ನನ್ಯಾಕೆ ಈ ಪ್ರಶ್ನೆ ಕೇಳ್ತೀರಿ” ಎಂದು ಮರು ಪ್ರಶ್ನಿಸಿದರು.
ರಾಜೇಂದ್ರ ಪ್ರಸಾದ್ ಆರೋಗ್ಯವಾಗಿದ್ದಾರೆ
ತಮ್ಮ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರ ಕಾರು ಅಪಘಾತದ ಬಗ್ಗೆ ಕೇಳಿದಾಗ, “ರಾಜೇಂದ್ರ ಪ್ರಸಾದ್ ಅವರನ್ನು ವೈದ್ಯರು ತಪಾಸಣೆ ನಡೆಸಿದ್ದಾರೆ. ಯಾವುದೇ ಆತಂಕ ಪಡಬೇಕಿಲ್ಲ. ಕತ್ತಿನ ಬಳಿ ನೋವಿದೆ. ಒಂದೆರಡು ದಿನ ವಿಶ್ರಾಂತಿ ಬೇಕು ಎಂದು ಹೇಳಿದ್ದಾರೆ. ತೀವ್ರ ತೆರನಾದ ತೊಂದರೆ ಉಂಟಾಗಿಲ್ಲ. ದೇವಿ ಯಲ್ಲಮ್ಮನೇ ಕಾಪಾಡಿದ್ದಾಳೆ” ಎಂದರು.
“ಒಬ್ಬ ಯುವಕನ ಸಾವಾಗಿದೆ. ಆತನ ಕುಟುಂಬದವರನ್ನು ಭೇಟಿ ಮಾಡಲು ಮಂತ್ರಿಗಳಿಗೆ ತಿಳಿಸುತ್ತೇನೆ. ನನಗೂ ಈ ಬಗ್ಗೆ ನೋವಿದೆ. ಮೃತಪಟ್ಟವನು ಇನ್ನೂ ಯುವಕ, ವಾಹನ ಚಾಲಕನಿಗೂ ಎದೆಯ ಬಳಿ ನೋವಾಗಿದೆ. ದೇವಸ್ಥಾನಕ್ಕೆ ತೆರಳಿ ಬರುವಾಗ ವಾಹನ ಅಡ್ಡ ಬಂದ ಕಾರಣಕ್ಕೆ ಈ ದುರ್ಘಟನೆ ನಡೆದಿದ್ದು, ಮೃತನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಲಾಗುವುದು” ಎಂದು ಹೇಳಿದರು.


