ಭಾರತದ ವಾಯುಪಡೆಯು ಉಗ್ರರ ತಾಣಗಳ ಮೇಲೆ “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ನಡೆಸಿದ ಬಳಿಕ ಕೇಂದ್ರ ಸರ್ಕಾರದ ಸೂಚನೆಯನ್ವಯ ರಾಜ್ಯದಲ್ಲೂ ನಾಗರಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ರಾಜ್ಯದ ವಿಮಾನ ನಿಲ್ದಾಣಗಳು ಮತ್ತು ಡ್ಯಾಮ್‌ಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಜಿಲ್ಲಾ ಕೇಂದ್ರಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುವುದು. ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯ ಬಗ್ಗೆ ಹೆಮ್ಮೆ ಇದೆ. ದೇಶದ ಹಿತಕ್ಕೆ ನಾವೆಲ್ಲ ಒಂದಾಗಿರುತ್ತೇವೆ ಎಂದು ಹೇಳಿದ್ದೇವೆ ಎಂದರು.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ಗುಂಡಿನ ದಾಳಿ ಬಳಿಕ ಪ್ರತ್ಯುತ್ತರಕ್ಕೆ ನಮ್ಮೆಲ್ಲರ ಬೆಂಬಲವಿದೆ. ದೇಶದ ಹಿತವನ್ನು ಕಾಪಾಡಲು ನಾವೆಲ್ಲ ಒಟ್ಟಾಗಿರುತ್ತೇವೆ. ಇಡೀ ಜನಸಮುದಾಯ ದೇಶದ ರಕ್ಷಣೆಗೆ ಜೊತೆಯಾಗಿ ನಿಲ್ಲಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದ ಡ್ಯಾಮ್ ಗಳು ಹಾಗೂ ವಿಮಾನ ನಿಲ್ದಾಣಗಳಲ್ಲಿ ಸೇರಿದಂತೆ ಎಲ್ಲೆಲ್ಲಿ ಭದ್ರತೆ ಬೇಕು ಅದನ್ನು ನೀಡಲಾಗುತ್ತದೆ. ಕೇಂದ್ರದ ಗುಪ್ತಚರ ಇಲಾಖೆಯ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದೇವೆ. ವಿದ್ಯುತ್ ಸ್ಥಾವರ, ಅಣೆಕಟ್ಟು, ವಿಮಾನ ನಿಲ್ದಾಣಗಳ ಸೇರಿದಂತೆ ಇನ್ನಿತರ ಪ್ರಮುಳ ಸ್ಥಳಗಳಲ್ಲಿ ಕೆಎಸ್‌ಐಎಸ್‌ಎಪೊ್ ತಂಡವನ್ನು ನಿಯೋಜಿಸಲಾಗಿದೆ. ರಾಜ್ಯ ಗುಪ್ತದಳವು ಕೇಂದ್ರದ ಇಂಟಲಿಜೆನ್ಸ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ನಾಗರಿಕ ಸುರಕ್ಷತೆಗಾಗಿ ಸಂಜೆ ಮಾಕ್ ಡ್ರಿಲ್ ನಾಲ್ಕು ಗಂಟೆಗೆ ನಡೆಯಲಿದ್ದು, ಜಿಲ್ಲಾ ಕೇಂದ್ರಗಳಿಗೂ ಮಾಹಿತಿ ನೀಡಿದ್ದೇವೆ. ಕೇಂದ್ರ ಸರ್ಕಾರದ ಕೂಡ ರಕ್ಷಣೆ ಕೊಡ್ತಿದೆ. ರಾಜ್ಯ ಸರ್ಕಾರ ಎಲ್ಲಿ ರಕ್ಷಣೆ ಕೊಡಬೇಕು ಅದನ್ನು ಕೊಡುತ್ತದೆ ಎಂದು ಹೇಳಿದರು.
ಈಗಾಗಲೇ ಕೇಂದ್ರ ಸರ್ಕಾರ ಭದ್ರತೆ ನೀಡುತ್ತಿರುವ ಸ್ಥಳಗಳಿಗೆ ಅವರೇ ಭದ್ರತೆ ನೀಡಲಿದ್ದಾರೆ. ನಮ್ಮ ಜವಾಬ್ಧಾರಿ ಇರುವ ಕಡೆ ನಾವು ಮಾಡುತ್ತೇವೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ಈಗಾಗಲೇ ಪಾಕಿಸ್ತಾನ ಪ್ರಜೆಗಳನ್ನು ಕಳಿಸಲಾಗಿದೆ. ಎಫ್‌ಆರ್‌ಆರ್‌ಒ ಸಂಪರ್ಕದಲ್ಲಿದ್ದು, ಅವರು ನೀಡುವ ಮಾಹಿತಿ ಆಧಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.