Wednesday, January 07, 2026
Menu

ಇಂದಿನಿಂದ ಹುಲಿ ಗಣತಿ ಅಂದಾಜು: ಸಚಿವ ಈಶ್ವರ ಖಂಡ್ರೆ

eshwar khandre

ಬೀದರ್: ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ, ಬಿ.ಆರ್.ಟಿ. ಹುಲಿ ಸಂರಕ್ಷಿತ ಧಾಮ ಸೇರಿದಂತೆ ರಾಜ್ಯದ ಎಲ್ಲ ಅರಣ್ಯ ಪ್ರದೇಶದಲ್ಲಿ ಇಂದಿನಿಂದ ಹುಲಿ ಹಾಗೂ ಮಾಂಸಹಾರಿ ಪ್ರಾಣಿಗಳ ಗಣತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಭಾಲ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶಾದ್ಯಂತ ಹುಲಿ ಅಂದಾಜು -2026 ನಡೆಯುತ್ತಿದ್ದು, ಇದು 6ನೇ ಅಂತ ಪ್ರಯೋಗವಾಗಿದೆ. ಈ ಹಿಂದೆ 2006, 2010, 2014, 2018 ಮತ್ತು 2022ರಲ್ಲಿ ಗಣತಿ ನಡೆದಿತ್ತು. ರಾಜ್ಯದಲ್ಲಿ ಸುಮಾರು 563 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು ಮತ್ತು ರಾಜ್ಯ ಹುಲಿ ಸಂಖ್ಯೆಯಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿತ್ತು ಎಂದರು.

ರಾಜ್ಯದ ಅರಣ್ಯ ಪ್ರದೇಶಗಳ ಪ್ರತಿ ವಲಯದಲ್ಲಿರುವ ಎಲ್ಲ 38 ಅರಣ್ಯ ವಿಭಾಗದ ಗಸ್ತುಗಳಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಕಳೆದ ಅಕ್ಟೋಬರ್ -ಡಿಸೆಂಬರ್ ನಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಪ್ರತ್ಯೇಕವಾಗಿ ಮತ್ತು ರಾಜ್ಯದ ಎಲ್ಲಾ 13 ಅರಣ್ಯ ವೃತ್ತಗಳ ಮುಂಚೂಣಿ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಇಂದಿನಿಂದ 3 ದಿನಗಳ ಕಾಲ ರಾಜ್ಯದ ಎಲ್ಲ ಗಸ್ತಿನಲ್ಲಿ 3 ಜನರ ತಂಡ ಪ್ರತಿ ನಿತ್ಯ 5 ಕಿ.ಮೀ. ಕಾಡಿನಲ್ಲಿ ಸಂಚರಿಸಿ ಹುಲಿ, ಚಿರತೆ ಸೇರಿದಂತೆ ಎಲ್ಲ ಮಾಂಸಹಾರಿ ಪ್ರಾಣಿಗಳ ಮತ್ತು ಆನೆಯ ಕಾಲುಗುರುತು, ಲದ್ದಿ, ಪ್ರತ್ಯಕ್ಷ ದರ್ಶನ ಇತ್ಯಾದಿ ವಿವರ ಕಲೆ ಹಾಕಲಿವೆ. ಬಳಿಕ ಜನವರಿ 15ರಿಂದ 17ರವರೆಗೆ 14 ಅರಣ್ಯ ವಿಭಾಗದಲ್ಲಿ 2ನೇ ಹಂತದ ಗಣತಿ ಅಂದಾಜು ನಡೆಯಲಿದ್ದು, ಪ್ರತಿ ತಂಡ ಕಾಡಿನಲ್ಲಿ ಸಂಚರಿಸಿ ಜಿಂಕೆ, ಕಡವೆ, ಕಾಡೆಮ್ಮೆ, ಕಾಡುಕೋಣ ಸೇರಿದಂತೆ ಸಸ್ಯಹಾರಿ ಪ್ರಾಣಿಗಳ ಸಾಕ್ಷಾತ್ ದರ್ಶನದ ಮಾಹಿತಿ ಕಲೆ ಹಾಕುತ್ತವೆ ಇದರಿಂದ ಎಲ್ಲಿ ಕ್ಯಾಮರಾ ಟ್ರ್ಯಾಪ್ ಅಳವಡಿಸಬೇಕು ಎಂಬುದನ್ನು ನಿರ್ಧರಿಸಲು ಅನುಕೂಲವಾಗುತ್ತದೆ ಎಂದರು.

ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಅವರನ್ನು ಎನ್.ಟಿ.ಸಿ.ಎ.ಗೆ ನೋಡಲ್ ಅಧಿಕಾರಿಯಾಗಿ ನಾಮನಿರ್ದೇಶನ ಮಾಡಿದ್ದು, ಇವರು ಈ ಅಂದಾಜಿನ ಉಸ್ತುವಾರಿ ವಹಿಸಲಿದ್ದಾರೆ. ಇವರಿಗೆ, ಯಾವ ಪ್ರದೇಶದಲ್ಲಿ ಎಷ್ಟು ಹುಲಿ ಮತ್ತು ಇತರ ಮಾಂಸಹಾರಿ ಪ್ರಾಣಿಗಳಿವೆ. ಆ ವಿಭಾಗದಲ್ಲಿ ಎಷ್ಟು ಸಸ್ಯಹಾರಿ ಪ್ರಾಣಿಗಳಿವೆ ಎಂಬುದನ್ನು ಪಟ್ಟಿಮಾಡಿ, ಯಾವ ಅರಣ್ಯದಲ್ಲಿ ಎಷ್ಟು ಹುಲಿಗಳಿವೆ, ಅವುಗಳಿಗೆ ಅಗತ್ಯ ಆಹಾರವಾದ ಸಸ್ಯಹಾರಿ ಪ್ರಾಣಿಗಳು ಎಷ್ಟಿವೆ ಎಂದು ಗ್ರಹಿಸಿ ಕಾನನದ ಧಾರಣಾ ಸಾಮರ್ಥ್ಯ (ಕ್ಯಾರಿಯಿಂಗ್ ಕ್ಯಪಾಸಿಟಿ) ಗುರುತಿಸಲೂ ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
2 ಹಂತದ ಸಮೀಕ್ಷೆಯಲ್ಲಿ ಕಲೆಹಾಕಲಾದ ಮಾಂಸಹಾರಿ ಪ್ರಾಣಿಗಳ ದತ್ತಾಂಶ ಬಳಿಸಿಕೊಂಡು ಮೂರನೇ ಹಂತದಲ್ಲಿ ಸೂಕ್ತ ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಗಳನ್ನು ಅಳವಡಿಸಲಾಗುವುದು, 5 ಹುಲಿ ಮೀಸಲು ಪ್ರದೇಶಗಳಲ್ಲಿ 2230 ಕ್ಯಾಮೆರಾ ಟ್ರ್ಯಾಪ್ ಗಳಿದ್ದು, ಎಲ್ಲಾ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದೂ ತಿಳಿಸಿದರು.

ಈ ಪೈಕಿ ನಾಗರಹೊಳೆ ಹುಲಿ ಮೀಸಲು ಪ್ರದೇಶ (600 ಕ್ಯಾಮೆರಾ ಟ್ರ್ಯಾಪ್), ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (550 ); ಬಿಆರ್.ಟಿ ಯಲ್ಲಿ (300); ಭದ್ರಾದಲ್ಲಿ (330); ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (450 ಕ್ಯಾಮೆರಾ ಟ್ರ್ಯಾಪ್ ಇದೆ ಎಂದು ವಿವರಿಸಿದರು.

ಹುಲಿ ಸಂರಕ್ಷಿತ ಪ್ರದೇಶದ ಹೊರಗೆ ಸಹ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲು ಕ್ರಮ ವಹಿಸಲಾಗಿದ್ದು, ಕ್ಯಾಮರಾ ಟ್ರ್ಯಾಪ್ ಸಮೀಕ್ಷೆ ಪೂರ್ಣಗೊಂಡಿರುವ ಹತ್ತಿರದ ಹುಲಿ ಮೀಸಲು ಪ್ರದೇಶಗಳು ಕ್ಯಾಮರಾ ಪೂರೈಸುತ್ತವೆ ಎಂದೂ ತಿಳಿಸಿದರು.

ಉದಾಹರಣಗೆ ಕಾವೇರಿ ವನ್ಯಜೀವಿ ಧಾಮಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕ್ಯಾಮರಾ ಒದಗಿಸಿದರೆ, ಎಂಎಂ ಹಿಲ್ಸ್ ವನ್ಯಜೀವಿ ಧಾಮಕ್ಕೆ ಬಿಆರ್.ಟಿ.ಯಿಂದ ಕ್ಯಾಮರಾ ಒದಗಿಸಲಾಗುವುದು ಅದೇ ರೀತಿ ನಾಗರಹೊಳೆ ಹುಲಿ ಮೀಸಲು ಪ್ರದೇಶದಿಂದ ಮಡಿಕೇರಿ ವನ್ಯಜೀವಿ ವಿಭಾಗ ಮತ್ತು ಮೈಸೂರು ಪ್ರಾದೇಶಿಕ ವಿಭಾಗಕ್ಕೆ ಕ್ಯಾಮೆರಾ ಪೂರೈಸಲಾಗುವುದು ಎಂದರು.

ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಡಿನಿಂದ ನಾಡಿಗೆ ಬರುತ್ತಿರುವುದನ್ನು ನೋಡಿದರೆ ಈ ಬಾರಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಗೋಚರಿಸುತ್ತಿದೆ. ಇದು ಗಣತಿಯಿಂದ ನಿಖರವಾಗಿ ತಿಳಿಯಲಿದೆ ಎಂದರು.

Related Posts

Leave a Reply

Your email address will not be published. Required fields are marked *