ಚಾಮರಾಜನಗರದ ಕೊಳ್ಳೇಗಾಲ ಗುಂಡಾಲ್ ಡ್ಯಾಂನಲ್ಲಿ ಗಂಡು ಹುಲಿಯ ಶವ ಪತ್ತೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದು, ಉರುಳು ಹಾಕಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಕುಮಾರ್(35) ಬಂಧಿತ. ಆರೋಪಿಯು ವನ್ಯಜೀವಿ ಬೇಟೆಯಾಡಲು ಉರುಳು ಹಾಕಿದ್ದ.
ಫೆಬ್ರವರಿ 15ರಂದು ಗಂಡು ಹುಲಿಯ ಮೃತದೇಹ ಗುಂಡಾಲ್ ಜಲಾಶಯದಲ್ಲಿ ಪತ್ತೆಯಾದ ಬಳಿಕ ಸ್ಥಳಕ್ಕೆ ಭೇಟಿ ಕೊಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಾಥಮಿಕ ತನಿಖೆಯಲ್ಲಿ ಕತ್ತಿಗೆ ಉರುಳು ಸಿಲುಕಿ ಪರದಾಡಿ ಬಳಿಕ ನೀರು ಕುಡಿಯಲು ಬಂದಾಗ ಬಿದ್ದು ಹುಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು. ಹುಲಿಯ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿತ್ತು.
ಗುಂಡಾಲ್ ಜಲಾಶಯದ ಸುತ್ತಮುತ್ತ ಜಮೀನುಗಳಿದ್ದು, ಬೆಳೆಗಳನ್ನು ಕಾಡು ಹಂದಿಗಳು ಬಂದು ನಾಶ ಮಾಡುತ್ತಿರುತ್ತವೆ. ಕಾಡು ಹಂದಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಕೆಲವರು ಬೈಕ್ ಕ್ಲಚ್ ಕೇಬಲ್ನ ಮೂಲಕ ಉರುಳು ಸಿದ್ಧಪಡಿಸಿ ಬೇಲಿ ಬಳಿ ಹಾಕುತ್ತಾರೆ.
ಪೊಲೀಸರು ಉರುಳು ಹಾಕಿದವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸಿದ್ದರು. ಒಬ್ಬ ಆರೋಪಿಯ ಬಂಧನ ಆಗಿದೆ. ಕುಮಾರ್ ಜೊತೆ ಇನ್ನಿತರರು ಸೇರಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯಾಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.
ಉರುಳುಗಳು ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ ಅಥವಾ ನೀವೇ ಉರುಳನ್ನು ತೆಗೆದು ಬಿಸಾಡಿ ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.


