ಸಹನೆ ಮತ್ತು ವೃತ್ತಿ ಸಂಹಿತೆಯನ್ನು ಕಾಪಾಡಿಕೊಳ್ಳಬೇಕಿರುವ ಜ್ಞಾನಸಂಪನ್ನ ನ್ಯಾಯವಾದಿಯೊಬ್ಬರು (ಲರ್ನೆಡ್ ಕೌನ್ಸಿಲ್) ಎಸಗಿದ ಈ ಕೃತ್ಯವೊಂದು ಎಪ್ಪತೈದು ವರ್ಷಗಳ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಕಪ್ಪು ಮಚ್ಚೆ. ವಕೀಲರು ಅಪಮಾನ ಎಸಗಿದ್ದು ಸುಪ್ರೀಂಕೋರ್ಟಿಗೆ. ಸಿಜೆಐ ಅವರಿಗಲ್ಲ.
ಸುಪ್ರೀಂಕೋರ್ಟ್‌ನಲ್ಲಿ ಹೀಗೊಂದು ದುರದೃಷ್ಟಕರ ಘಟನೆ. ಪ್ರಜಾತಂತ್ರಕ್ಕೆ ಘೋರ ಅಪಮಾನ ಎಸಗುವ ಕೃತ್ಯವಿದು. ಇದು ಖಂಡನೀಯ. ಸುಪ್ರೀಂಕೋರ್ಟಿನಲ್ಲಿ ಪ್ರಾಕ್ಟೀಸ್ ಮಾಡುವಂತಹ ಮತ್ತು ವಯಸಿನಲ್ಲಿ ಎಪ್ಪತ್ತು ವರ್ಷ ದಾಟಿದ ಹಿರಿಯ ವ್ಯಕ್ತಿ ಅರ್ಥಾತ್ ವೃತ್ತಿಯಲ್ಲಿ ನ್ಯಾಯವಾದಿ ಆಗಿರುವ ವ್ಯಕ್ತಿಯಿಂದ ಮುಖ್ಯ ನ್ಯಾಯಮೂರ್ತಿಗಳತ್ತ ಶೂ ಎಸೆದಿದ್ದನ್ನು ಬರೀ ಬಾಯಿ ಮಾತಿನಿಂದ ಖಂಡಿಸುವಂತಹದಲ್ಲ. ವಕೀಲರ ಅಸಹನೆ ಮತ್ತು ಆಕ್ರೋಶ ಏನೇ ಇರಲಿ. ಇದನ್ನು ಪ್ರತಿಭಟಿಸುವಂತಹ ಮಾರ್ಗಗಳು ಕೂಡಾ ಪ್ರಜಾತಂತ್ರಕ್ಕೆ ಮಾರಕ ಮತ್ತು ಬಾಧಕವಾಗಿರಬಾರದು ಮತ್ತು ಅಸಹನೀಯವಾಗಿರಬಾರದು.
ಸನಾತನ ಧರ್ಮದ ಕುರಿತು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಮುಕ್ತ ನ್ಯಾಯಾಲಯದಲ್ಲಿ ಮಾಡಿದ ವ್ಯಾಖ್ಯಾನದಿಂದ ಪ್ರಭಾವಿತರಾದ ವಕೀಲರು ಈ ಕೃತ್ಯ ಎಸೆದಿದ್ದಾರೆನ್ನಲಾಗಿದೆ. ಗವಾಯಿ ಅವರು ಸನಾತನ ಧರ್ಮಕ್ಕೆ ಘಾಸಿ ಮಾಡಿದ್ದಾರೆಂಬುದು ಶೂ ಎಸೆದ ವಕೀಲರ ಆಕ್ರೋಶ. ಇಂತಹ ಘಟನೆಗಳು ಭಾರತೀಯ ನ್ಯಾಯಾಲಯಗಳಲ್ಲಿ ಆಗೊಮ್ಮೆ -ಈಗೊಮ್ಮೆ ನಡೆಯುವಂತಹದು. ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡವರು ಮತ್ತು ತೀರ್ಪುಗಳಿಂದ ಮತ್ತು ತೀವ್ರ ಘಾಸಿಗೊಳದವರಿಂದ ಇಂತಹ ಕೃತ್ಯಗಳು ನಡೆದಿರುವ ಹಲವು ಉದಾಹರಣೆಗಳಿವೆ. ಹೈಕೋರ್ಟ್ ಮತ್ತು ಕೆಳಕೋರ್ಟ್‌ಗಳಲ್ಲಿ ಇಂತಹ ಹಲವಾರು ಘಟನೆಗಳು ನಡೆದಿರುವ ಉದಾಹರಣೆಗಳಿವೆ.
ಮಕ್ತ ನ್ಯಾಯಾಲಯದಲ್ಲಿ ಅದರಲ್ಲಿಯೂ ನ್ಯಾಯ ಪ್ರತಿಪಾದನೆಯ ಕಲಾಪದ ಸಮಯದಲ್ಲಿ ಯಾರೇ ಆಗಲಿ. ಇದಕ್ಕೆ ಭಂಗ ಉಂಟು ಮಾಡುವ ಮತ್ತು ನ್ಯಾಯಿಕ ವ್ಯವಸ್ಥೆಗೆ ಹಾನಿ ಉಂಟು ಮಾಡುವ ರೀತಿಯ ಪ್ರಸಂಗವನ್ನು ನ್ಯಾಯಾಂಗ ನಿಂದನೆಗೆ ಸಮಾನವಾದುದು. ಇಂತಹ ಘಟನೆಗಳನ್ನು ನ್ಯಾಯಾಲಯ ಅತಿಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ (ಸುಮೋಟೋ) ಪ್ರಕರಣವನ್ನು ದಾಖಲಿಸಿ ವಿಚಾರಣೆ ನಡೆಸುವುದುಂಟು. ಆದರೆ ಸೋಮವಾರಂದು ದೇಶದ ಸರ್ವೋನ್ನತ ನ್ಯಾಯಪೀಠದ ಮುಂದೆ ವಕೀಲರೊಬ್ಬರು ಎಸಗಿದ ಕೃತ್ತವನ್ನು ಬಾರ್ ಕೌನ್ಸಿಲ್ ಖಂಡಿಸುವುದು ನಿಶ್ಚಿತ. ಮಿಗಿಲಾಗಿ ವಕೀಲರ ವೃತ್ತಿ ಸಂಹಿತೆಗೆ ಇದು ಕಳಂಕ. ಧರ್ಮಕ್ಕೆ ಅಪಚಾರ ಆಯಿತೆಂದು ಮಮ್ಮಲ ಮುರುಗಿದ ವಕೀಲ ಮಹಾಶಯ ತಾನು ಕೈ ಹಿಡಿದ ವಕೀಲ ವೃತ್ತಿಯ ಎಲ್ಲ ಸಂಹಿತೆಗಳನ್ನು (ಪ್ರೊಫೆಷನಲ್ ಎಥಿಕ್ಸ್) ಗಾಳಿಗೆ ತೂರಿದ್ದು ಗಮನಾರ್ಹ.
ಗವಾಯಿ ಅವರು ತಾವು ಸನಾತನ ಧರ್ಮ ಕುರಿತು ಮುಕ್ತ ನ್ಯಾಯಾಲಯದಲ್ಲಿ ಮಾಡಿದ ವ್ಯಾಖ್ಯಾನಕ್ಕೆ ತದನಂತರದಲ್ಲಿ ವಿಷಾಧ ವ್ಯಕ್ತಪಡಿಸಿದರೂ ಬಲಪಂಥೀಯರಿಗಂತೂ ಗವಾಯಿ ಅವರ ಮೇಲೆ ಸಿಟ್ಟು ಮತ್ತು ಆಕ್ರೋಶ ಕಡಿಮೆಯಾಗಿಲ್ಲ ಎಂಬುದಕ್ಕೆ ಇದೊಂದು ಸಾಕ್ಷಿ. ದೇವರು ಮತ್ತು ಭಗವಂತನ ಅಸ್ತಿತ್ವ ವನ್ನುಅಲ್ಲಗೆಳೆಯುವ ಮತ್ತು ಹೀಯಾಳಿಸುವ ಅದೆಷ್ಟೋ ಟಿವಿ ಧಾರಾವಾಹಿಗಳು ಇಂದು ದೇಶದ ಎಲ್ಲ ಭಾಷೆಗಳಲ್ಲಿ ತುಂಬಿಹೋಗಿವೆ. ಇದರ ವಿರುದ್ದವೂ ಸನಾತನಿಗಳು ಈಗ ಉಗ್ರಸ್ವರೂಪದ ಪ್ರತಿಭಟನೆ ಮಾಡುವರೇ ? ಸಹನೆ ಮತ್ತು ವೃತ್ತಿ ಸಂಹಿತೆಯನ್ನು ಕಾಪಾಡಿಕೊಳ್ಳಬೇಕಿರುವ ಜ್ಞಾನಸಂಪನ್ನ ನ್ಯಾಯಪಂಡಿತರೊಬ್ಬರು (ಲರ್ನೆಡ್ ಕೌನ್ಸಿಲ್) ಎಸಗಿದ ಈ ಕೃತ್ಯವೊಂದು ಎಪ್ಪತೈದು ವರ್ಷಗಳ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಕಪ್ಪು ಮಚ್ಚೆ. ವಕೀಲರು ಅಪಮಾನ ಎಸಗಿದ್ದು ಸುಪ್ರೀಂಕೋರ್ಟಿಗೆ. ಸಿಜೆಐ ಅವರಿಗಲ್ಲ.