Menu

ಕಿತ್ತೂರಿನಲ್ಲಿ ಹೆದ್ದಾರಿ ಸ್ವಚ್ಛಗೊಳಿಸುತ್ತಿದ್ದಾಗ ಟ್ಯಾಂಕರ್‌ ಹರಿದು ಮೂವರು ಕಾರ್ಮಿಕರ ಸಾವು

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್​ನಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಟ್ಯಾಂಕರ್ ಹರಿದು ಮೂವರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಲಬುರಗಿ ಮೂಲದ ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಕೆಲಸ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಟ್ಯಾಂಕರ್ ಚಾಲಕನಿಗೂ ಗಾಯಗಳಾಗಿವೆ. ಗಾಯಾಳುಗಳನ್ನುಹೆದ್ದಾರಿ ಗಸ್ತು ಸಿಬ್ಬಂದಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕಲಬುರಗಿ ಚಿಂಚೋಳಿ ತಾಲೂಕಿನ ಶಿರೋಳಿ ಗ್ರಾಮದ ರಾಮಚಂದ್ರ ಜಾಧವ್ (45), ಮಗ ಮಹೇಶ್ ರಾಮಚಂದ್ರ ಜಾಧವ್ (18), ರಾಮಣ್ಣ ಅಲಿಯಾಸ್ ರಮೇಶ್ (38) ಮೃತಪಟ್ಟ ಕಾರ್ಮಿಕರು. ಮೃತ ರಾಮಚಂದ್ರ ಅವರ ಪತ್ನಿ ಲಕ್ಷ್ಮೀಬಾಯಿ, ಅನುಶ್ರೀ, ಮೃತ ರಾಮಣ್ಣನ ಪತ್ನಿ ಭೀಮವ್ವ ಎಂಬವರಿಗೆ ಗಂಭೀರ ಗಾಯವಾಗಿದೆ. ಭೀಮವ್ವ ಅವರ ಎರಡೂ ಕಾಲುಗಳು ತುಂಡಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರ್ಮಿಕರು ಎನ್​ಹೆಚ್ಎಐನಲ್ಲಿ ದಿನಗೂಲಿ ಕೆಲಸಕ್ಕಾಗಿ ಕಲಬುರಗಿಯ ಶಹಬಾದ್, ಸೇಡಂ, ಚಿಂಚೋಳಿಯಿಂದ ಬಂದಿದ್ದರು. ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿ ದ್ದಾಗ ಆಯಿಲ್ ತುಂಬಿದ್ದ ಟ್ಯಾಂಕರ್ ಏಕಾಏಕಿ ಬಂದು ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಎಸ್‌ಪಿ ಆರ್.ಬಿ ಬಸರಗಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.  ಆಯಿಲ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕ್ರೇನ್ ಮೂಲಕ ಟ್ಯಾಂಕರ್ ಮೇಲೆತ್ತಿದ್ದಾರೆ.

Related Posts

Leave a Reply

Your email address will not be published. Required fields are marked *