Menu

3,000 ಕೋಟಿ ರೂ. ಸಾಲ ವಂಚನೆ: ರಿಲಯನ್ಸ್ ಗ್ರೂಪ್​ ವಿರುದ್ಧ ಇಡಿ ದಾಳಿ

3,000 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಉದ್ಯಮಿ ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್​ಗೆ ಸೇರಿದ ಹಲವು ಕಂಪನಿಗಳ ಮೇಲೆ ದಾಳಿ ಮಾಡಿದೆ.

35ಕ್ಕೂ ಹೆಚ್ಚು ಸ್ಥಳಗಳು, ರಿಲಯನ್ಸ್ ಗ್ರೂಪ್‌ನ 50 ಕಂಪನಿಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ ದಾಳಿ ನಡೆಸಿದೆ ಎನ್ನಲಾಗಿದೆ. ಯೆಸ್‌ ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ದಾಖಲಿಸಿದ್ದ 2 ಎಫ್‌ಐಆರ್‌ಗಳ ಅನ್ವಯ ಬ್ಯಾಂಕ್ ಆಫ್ ಬರೋಡಾ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮತ್ತಿತರ ಏಜೆನ್ಸಿಗಳಿಂದ ದೊರೆತ ಮಾಹಿತಿ ಆಧಾರದಲ್ಲಿ ಶೋಧ ನಡೆಸುತ್ತಿದೆ. 25ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗಿದೆ.

2017 ಮತ್ತು 2019ರ ನಡುವೆ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಅಡಿಯಲ್ಲಿರುವ ಸಂಸ್ಥೆಗಳಿಗೆ ಯೆಸ್‌ ಬ್ಯಾಂಕ್‌ 3,000 ಕೋಟಿ ರೂ. ಸಾಲ ನೀಡಿತ್ತು. ಈ ಸಾಲದ ಹಣವನ್ನು ಗ್ರೂಪ್‌ನ ಇತರ ಶೆಲ್‌ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಮೂಲಕ ಬ್ಯಾಂಕ್‌ಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನ ವಂಚಿಸುವ ಮೂಲಕ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಇಡಿ ಪತ್ತೆ ಮಾಆಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಸಾಕ್ಷ್ಯಾಧಾರ ಸಿಕ್ಕಿರುವುದಾಗಿ ಹೇಳಿದೆ.

ಸಾಲ ಅನುಮೋದನೆ ವಿಚಾರದಲ್ಲಿ ಯೆಸ್ ಬ್ಯಾಂಕ್ ನಡೆ ಅನುಮಾನ ಹುಟ್ಟಿಸಿದೆ. ಸಾಲ ನೀಡುವಾಗ ಕಂಪನಿಗಳು, ಸಾಮಾನ್ಯ ನಿರ್ದೇಶಕರಿಗೆ ಸಂಬಂಧಿಸಿದಂತೆ ಸರಿಯಾಗಿ ಅವಲೋಕನ ಮಾಡದೆ ಸಾಲದ ಹಣ ಬಿಡುಗಡೆ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. 3,000 ಕೋಟಿ ಸಾಲ ಮಂಜೂರು ಮಾಡುವಲ್ಲಿ ಯೆಸ್‌ ಬ್ಯಾಂಕ್‌ನ ಸಿಇಒ ಹಾಗೂ ಇತರರು ಭಾಗಿಯಾಗಿದ್ದಾರೆ.

ರಿಲಯನ್ಸ್ ಹೋಮ್ ಫೈನಾನ್ಸ್ ನಲ್ಲಿ ಅಕ್ರಮ ನಡೆದಿರುವ ಬಗ್ಗೆ ಸೆಬಿ ವರದಿ ಸಲ್ಲಿಸಿದ್ದು, ಸಂಸ್ಥೆಯ ಕಾರ್ಪೊರೇಟ್ ಸಾಲ ಬಂಡವಾಳವು 2017-18ನೇ ಹಣಕಾಸು ವರ್ಷದಲ್ಲಿ 3,742 ಕೋಟಿ ರೂ.ಗಳಷ್ಟಿತ್ತು. 2018-19ನೇ ಹಣಕಾಸು ವರ್ಷದಲ್ಲಿ ಇದರ ಪ್ರಮಾಣ 8,670 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಹೇಳಿದೆ.

Related Posts

Leave a Reply

Your email address will not be published. Required fields are marked *