ಬೆಂಗಳೂರು: ನಗರ ಹಾಗೂ ಕೋಲಾರದಲ್ಲಿ ಮಂಗಳವಾರ ರಾತ್ರಿ ದಿಢೀರ್ ದಾಳಿ ನಡೆಸಿ ಬಂಧಿಸಿರುವ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಎಎಸ್ಐ ಚಾಂದ್ ಪಾಷಾ ಮತ್ತು ಶಂಕಿತ ಉಗ್ರನ ತಾಯಿ ಫಾತೀಮಾಳನ್ನು ಕೋರ್ಟ್ ಇದೇ ಜು. 14 ರವರೆಗೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ಕಸ್ಟಡಿಗೆ ನೀಡಿದೆ.
ಬಂಧಿತ ಮೂವರು ಆರೋಪಿಗಳನ್ನು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದ ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಜು.15ರವರೆಗೆ 6 ದಿನಗಳ ಕಾಲ ಎನ್ ಐಎ ಕಸ್ಟಡಿಗೆ ನೀಡಿದೆ.
ವಶಕ್ಕೆ ಪಡೆದಿರುವ ಆರೋಪಿಗಳಾದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಚಂದ್ ಪಾಷಾ ಹಾಗೂ ಶಂಕಿತ ಉಗ್ರನ ತಾಯಿ ಅನೀಸ್ ಫಾತೀಮಾಗೆ ಮಂಗಳೂರಿನ ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಸ್ಫೋಟ ಸೇರಿ ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ನಾಸೀರ್ ಜತೆ ಪ್ರಬಲವಾದ ಸಂಪರ್ಕವಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.
ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ನಾಸೀರ್ ಸಂಚು ಹೂಡುತ್ತಿದ್ದ. ಜೈಲಿನಿಂದಲೇ ಯುವಕರ ತಂಡ ತಯಾರು ಮಾಡುತ್ತಿದ್ದ. ದಕ್ಷಿಣ ಭಾರತದಲ್ಲಿ ನಡೆದ ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ಈತನಾಗಿದ್ದು, ಹಲವು ಕೇಸ್ಗಳಲ್ಲಿ ಈತನ ಕೈವಾಡವಿದೆ ಎನ್ನುವುದು ಎನ್ಐಎ ಅಧಿಕಾರಿಗಳ ತನಿಖೆಯಲ್ಲಿ ತಿಳಿದುಬಂದಿದೆ.
ಸ್ಲೀಪರ್ ಸೆಲ್ ಜತೆ ನೇರ ಸಂಪರ್ಕ ಹೊಂದಿರುವ ಉಗ್ರ ನಾಸೀರ್, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ. ಅದಕ್ಕಾಗಿ ಜೈಲಿನಲ್ಲಿ ಇದ್ದುಕೊಂಡೇ ಯುವಕರ ತಂಡ ಕಟ್ಟಿದ್ದ ಎನ್ನುವ ಆತಂಕಕಾರಿ ಸಂಗತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತಂಡ ಕಟ್ಟಿದ್ದ ನಾಸೀರ್ :
ಉಗ್ರ ನಾಸೀರ್, ಕೊಲೆ ಕೇಸ್ನಲ್ಲಿ ಶಾಮೀಲಾಗಿದ್ದ ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಇದ್ದ ತಂಡ ಕಟ್ಟಿದ್ದು,ಈ ತಂಡ ಗ್ರೆನೇಡ್, ಪಿಸ್ತೂಲ್, ಸ್ಫೋಟಕ ವಸ್ತುಗಳ ಸಮೇತ ಸಿಕ್ಕಿಬಿದ್ದಿತ್ತು. ಬೆಂಗಳೂರಿನ ಆರ್.ಟಿ.ನಗರ, ಹೆಬ್ಬಾಳದಲ್ಲಿ ಸಿಕ್ಕಿ ಬಿದ್ದಿತ್ತು.
ಇದೀಗ ಪ್ರಮುಖ ಆರೋಪಿ ಜುನೈದ್ಗಾಗಿ ಎನ್ಐಎ ಹುಡುಕಾಟ ನಡೆಸುತ್ತಿದ್ದು ಮಹತ್ವದ ಸುಳಿವು ಆಧರಿಸಿ ದಾಳಿ ನಡೆಸಿದಾಗ ಡಾ. ನಾಗರಾಜ್, ಚಂದ್ ಪಾಷಾ ಹಾಗೂ ಅನೀಸ್ ಫಾತೀಮಾ ಸಿಕ್ಕಿಬಿದ್ದಿದ್ದಾರೆ.
ಪ್ರಕರಣದಲ್ಲಿ ಸಿಮ್ ಕಾರ್ಡ್ಗಳನ್ನು ಪೂರೈಕೆ ಮಾಡಿರುವ ಆರೋಪದ ಮೇಲೆ ವೈಟ್ಫೀಲ್ಡ್ ಬಳಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ಮೂಲದ ಸತೀಶ್ ಗೌಡನಿಗೂ ಎನ್ಐಎ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ.
ಮೊಬೈಲ್ ಸ್ಮಗ್ಲಿಂಗ್:
ಕಳೆದ ನಾಲ್ಕೈದು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯರಾಗಿ ಕೆಲಸ ಮಾಡುತ್ತಿದ್ದ ಡಾ. ನಾಗರಾಜ್ ಉಗ್ರ ಟಿ.ನಾಸೀರ್ ಸೇರಿದಂತೆ ಕೈದಿಗಳಿಗೆ ಮೊಬೈಲ್ ಸ್ಮಗ್ಲಿಂಗ್ ಮಾಡಿದ್ದರು.ಇದಕ್ಕೆ ಸಹಾಯಕಿ ಪವಿತ್ರಾ ನೆರವು ನೀಡುತ್ತಿರುವುದು ಪತ್ತೆಯಾಗಿದ ಆಕೆಯ ಬಂಧನ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಎಎಸ್ಐ ಚಂದ್ ಪಾಷಾ:
2022ರಲ್ಲಿ ಟಿ.ನಾಸೀರ್ ಪರ ಕೆಲಸ ಮಾಡಿದ ಚಂದ್ ಪಾಷಾ, ನಾಸೀರ್ನನ್ನು ಜೈಲಿನಿಂದ ಯಾವ್ಯಾವ ಕೋರ್ಟ್ ಗೆ ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿ ಸೋರಿಕೆ ಮಾಡುತ್ತಿದ್ದ. ಟಿ.ನಾಸೀರ್ ಸೇರಿದಂತೆ ಆತನಿಗೆ ಸಂಪರ್ಕ ಇರುವ ಸಂಘಟನೆಗಳ ಸದಸ್ಯರಿಗೆ ಮಾಹಿತಿ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ನಾಪತ್ತೆಯಾಗಿರುವ ಜುನೈದ್ ಅಹ್ಮದ್ ತಾಯಿ ಅನೀಸ್ ಫಾತೀಮಾ, ಟಿ.ನಾಸೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಎಲ್ಇಟಿಗೆ ಫಂಡ್ ಸಂಗ್ರಹಿಸುವ ಬಗ್ಗೆ ಈಕೆಗೆ ನಾಸೀರ್ ಮಾಹಿತಿ ನೀಡುತ್ತಿದ್ದ. ಈ ಮಾಹಿತಿಯನ್ನು ವಿದೇಶದಲ್ಲಿದ್ದ ಮಗ ಜುನೈದ್ ಗೆ ಫಾತೀಮಾ ತಿಳಿಸಿದ್ದರು.